ಕಾರವಾರ: ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಒಂದೇ ಬೈಕ್‌ ಮೇಲೆ ಸವಾರಿ ಮಾಡುತ್ತಿದ್ದ ಇಬ್ಬರು ಯಕ್ಷಗಾನ ಕಲಾವಿದರು ಲಾರಿ ಹಾಯ್ದು ಸ್ಥಳದಲ್ಲೇ ಮೃತಪಟ್ಟಘಟನೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ ಗುಣವಂತೆ ಸಮೀಪದ ಹಕ್ಕಲಕೇರಿ ಬಳಿ ಹೆದ್ದಾರಿಯಲ್ಲಿ ಸಂಭವಿಸಿದೆ. 

ಸೌಕೂರು ಮೇಳದಲ್ಲಿ ಕಲಾವಿದರಾಗಿದ್ದ ಮಾವಿನಕುರ್ವಾದ ಪ್ರಸನ್ನ ಆಚಾರಿ ಹಾಗೂ ಕುಂದಾಪುರ ಸಿದ್ಧಾಪುರದ ದಿನೇಶ್‌ ಐಗಳ್‌ ಮೃತಪಟ್ಟವರು. ಇಬ್ಬರೂ ಬುಧವಾರ ರಾತ್ರಿ ಮುರ್ಡೇಶ್ವರದಲ್ಲಿ ಏರ್ಪಡಿಸಿದ್ದ ಯಕ್ಷಗಾನ ಪಾತ್ರ ನಿರ್ವಹಿಸಲು ಬೈಕ್‌ ಮೇಲೆ ತೆರಳುತ್ತಿದ್ದರು. 

ಬೈಕ್‌ ನಿಯಂತ್ರಣ ತಪ್ಪಿ ಹಕ್ಕಲಕೇರಿ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಗುರುಳಿದಾಗ ಇಬ್ಬರ ಮೇಲೆ ಲಾರಿ ಹರಿದು ಭೀಕರವಾಗಿ ಇಬ್ಬರು ಕಲಾವಿದರು ಮೃತಪಟ್ಟಿದ್ದಾರೆ. ಮಂಕಿ ಠಾಣಾ ಪೊಲೀಸರು ಸ್ಥಳಕ್ಕೆ ಹಾಜರಾಗಿ ತನಿಖೆ ನಡೆಸಿದ್ದಾರೆ.