ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಪತ್ರಕರ್ತರ ದುರ್ಮರಣ

First Published 14, Jan 2018, 11:54 AM IST
Two Separate Accident 2 Journalist Died
Highlights

ಎರಡು ಪ್ರತ್ಯೇಕ ಅಪಘಾತ ದುರ್ಘಟನೆಯಲ್ಲಿ ಹಿರಿಯ ಪತ್ರಕರ್ತ ಡಾ. ವೀರೇಶ್ ಹಿರೆಮಠ್(46) ಹಾಗೂ ಸುದ್ದಿ ಟಿವಿ ಶಿರಸಿ ವರದಿಗಾರ ಮೌನೇಶ್ ಪೋತರಾಜ(28) ಮೃತಪಟ್ಟಿದ್ದಾರೆ.

ಬೆಂಗಳೂರು(ಜ.14): ಎರಡು ಪ್ರತ್ಯೇಕ ಅಪಘಾತ ದುರ್ಘಟನೆಯಲ್ಲಿ ಹಿರಿಯ ಪತ್ರಕರ್ತ ಡಾ. ವೀರೇಶ್ ಹಿರೆಮಠ್(46) ಹಾಗೂ ಸುದ್ದಿ ಟಿವಿ ಶಿರಸಿ ವರದಿಗಾರ ಮೌನೇಶ್ ಪೋತರಾಜ(28) ಮೃತಪಟ್ಟಿದ್ದಾರೆ.

ಗೋವಾ ಪ್ರವಾಸ ಮುಗಿಸಿ ಕುಟುಂಬದೊಂದಿಗೆ ಹಿಂದಿರುಗುತ್ತಿದ್ದಾಗ ಕಾರು ಮರಕ್ಕೆ ಗುದ್ದಿದೆ. ಡಾ. ವೀರೇಶ್ ಹಿರೆಮಠ್ ಸಾವನ್ನಪ್ಪಿದ್ದು, ಪತ್ನಿ ಗೌರಿ, ಕಾರು ಚಾಲಕ ಸುನೀಲ್'ಗೆ ಗಂಭೀರ ಗಾಯಗಳಾಗಿದ್ದು ಆಸ್ಫತ್ರೆಗೆ ದಾಖಲಿಸಲಾಗಿದೆ. ಡಾ. ವೀರೇಶ್ ಹಿರೆಮಠ್ ಬಾಗಲಕೋಟೆಯ ಬಿವಿವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರಜಾವಾಣಿ, ಸುವರ್ಣ ನ್ಯೂಸ್, ವಿಜಯವಾಣಿ ಹಾಗೂ ವಿಶ್ವವಾಣಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಹಿರೆಮಠ್ ಆ ಬಳಿಕ ಅಧ್ಯಾಪಕ ವೃತ್ತಿಗೆ ಮರಳಿದ್ದರು. ಅವರ ಮೃತ ದೇಹವನ್ನು ಧಾರವಾಡದ ಸಿವಿಲ್ ಆಸ್ಫತ್ರೆಯಲ್ಲಿಡಲಾಗಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಮತ್ತೊಂದು ಅಪಘಾತ ಪ್ರಕರಣದಲ್ಲಿ ಸುದ್ದಿ ಟಿವಿಯ ಶಿರಸಿ ವರದಿಗಾರ ಮೌನೇಶ್ ಪೋತರಾಜ(28) ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗುಂಡೂರು ಬಳಿ ಈ ಅವಘಡ ಸಂಭವಿಸಿದೆ. ತಡರಾತ್ರಿ ಶಿರಸಿಯಿಂದ ಛಬ್ಬಿ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಇಬ್ಬರು ಪತ್ರಕರ್ತರ ಸಾವಿಗೆ ಪತ್ರಕರ್ತರ ಬಳಗ ಸೇರಿದಂತೆ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ.

loader