ಬೆಂಗಳೂರು(ಸೆ. 13): ಕಾವೇರಿ ಗಲಭೆ ತೀವ್ರವಾಗಿರುವ ಸುಂಕದಕಟ್ಟೆ ಸಮೀಪದ ಲಗ್ಗೆರೆಯಿಂದ ನಾಪತ್ತೆಯಾಗಿದ್ದ ಮೂವರು ಬಾಲಕರ ಪೈಕಿ ಇಬ್ಬರು ಮಕ್ಕಳು ಪತ್ತೆಯಾಗಿದ್ದಾರೆ. ಲಗ್ಗೆರೆಯ ನಿವಾಸಿಗಳಾದ ಕುಮಾರ್(15) ಮತ್ತು ಶ್ರೀಕಾಂತ್(11) ಅವರು ತಮಿಳುನಾಡಿನ ಕಾಟ್'ಪಾಡಿ ರೈಲ್ವೆ ನಿಲ್ದಾಣ ಬಳಿ ಸಿಕ್ಕಿದ್ದಾರೆ. ಸದ್ಯ ಈ ಇಬ್ಬರು ಬಾಲಕರು ತಮಿಳುನಾಡು ಪೊಲೀಸರ ವಶದಲ್ಲಿದ್ದಾರೆ. ಬಾಲಕರ ಮೂಲ ದಾಖಲೆಗಳನ್ನು ತಂದು ಅವರನ್ನ ಕರೆದೊಯ್ಯುವಂತೆ ಕರ್ನಾಟಕ ಪೊಲೀಸರಿಗೆ ಅಲ್ಲಿನ ಪೊಲೀಸರು ಸೂಚನೆ ನೀಡಿದ್ದಾರೆ. ಇನ್ನು, ನಿನ್ನೆ ನಾಪತ್ತೆಯಾಗಿದ್ದ ದರ್ಶನ್(14) ಎಂಬ ಮೂರನೇ ಬಾಲಕನ ಸುಳಿವು ಇನ್ನೂ ಸಿಕ್ಕಿಲ್ಲ.
ಸುವರ್ಣನ್ಯೂಸ್'ಗೆ ಸಿಕ್ಕ ಮಾಹಿತಿ ಪ್ರಕಾರ ಕುಮಾರ್ ಮತ್ತು ಶ್ರೀಕಾಂತ್ ಅವರು ಗಲಭೆಗೆ ಬೆದರಿ ರೈಲು ಹತ್ತಿದ್ದರೆನ್ನಲಾಗಿದೆ.
ನಿನ್ನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಲಗ್ಗೆರೆ ಸಮೀಪದಿಂದ ಮೂವರು ಬಾಲಕರು ಕಾಣೆಯಾಗಿದ್ದರುಕುಮಾರ್ ಮತ್ತು ಶ್ರೀಕಾಂತ್ ಅವರು ಪ್ರೀತಿ ನಗರದ ನಿವಾಸಿಗಳಾದ ದಂಪತಿಯ ಪುತ್ರರಾಗಿದ್ದಾರೆ. ಕುಮಾರ್'ನು ಬಾಲಗಂಗಾಧರ್ ತಿಲಕ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದರೆ, ಶ್ರೀಕಾಂತ್ ಸಿರಿ ಪಬ್ಲಿಕ್ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಇನ್ನು, ದರ್ಶನ್'ನು ಸೈನಿಕ್ ಸ್ಕೂಲ್'ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.
ನಿನ್ನೆ ಇವರ ಪ್ರದೇಶದಲ್ಲಿ ಕಾವೇರಿ ಹೋರಾಟದ ಕಿಚ್ಚು ಹೆಚ್ಚಾಗಿದ್ದ ವೇಳೆ ಬಾಲಕರು ರಸ್ತೆಗೆ ಹೋಗಿದ್ದಾರೆ. ಪೋಷಕರು ಇವರತ್ತ ಗಮನ ಹರಿಸಿಲ್ಲ. ರಾತ್ರಿಯಾದರೂ ಮಕ್ಕಳು ಮನೆಗೆ ವಾಪಸ್ಸಾಗದೇ ಹೋದಾಗ ಆತಂಕಕ್ಕೊಳಗಾಗಿದ್ದಾರೆ. ಈ ಪೋಷಕರು ಇಂದು ಪ್ರದೇಶದ ಸುತ್ತಮುತ್ತ ತಮ್ಮ ಮಕ್ಕಳ ಫೋಟೋ ಹಿಡಿದು ತೀವ್ರ ಹುಡುಕಾಟ ನಡೆಸುತ್ತಿದ್ದುದು ಕಂಡುಬಂದಿತ್ತು.
(ಫೋಟೋದಲ್ಲಿರುವುದು ಶ್ರೀಕಾಂತ್ ಮತ್ತು ಕುಮಾರ್)
