ಮುಂಬೈ(ಜೂ.26): ಇದು ನಿಜಕ್ಕೂ ಅಪರೂಪದಲ್ಲಿ ಅಪರೂಪರದ ಪ್ರಕರಣ. ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಲು ರೈಲಿನಲ್ಲಿ ಬರುತ್ತಿದ್ದ ಇಬ್ಬರು ಶಾಸಕರನ್ನು ಕಳ್ಳರು ದೋಚಿದ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದೆ.

ವಿದರ್ಭ ಎಕ್ಸಪ್ರೆಸ್ ರೈಲಿನಲ್ಲಿ ಮುಂಬೈನತ್ತ ಪ್ರಯಾಣ ಬೆಳೆಸಿದ್ದ ಚಿಕ್ಲಿಯ ಕಾಂಗ್ರೆಸ್ ಶಾಸಕ ರಾಹುಲ್ ಬೊಂಡ್ರೆ, ಇಲ್ಲಿನ ಕಲ್ಯಾಣ್ ರೈಲು ನಿಲ್ದಾಣದಲ್ಲಿ ಕಳ್ಳನೋರ್ವ ತಮ್ಮ ಪತ್ನಿಯ ಪರ್ಸ್ ಕದ್ದಿದ್ದಾಗಿ ದೂರು ದಾಖಲಿಸಿದ್ದಾರೆ.

ಇದೇ ವೇಳೆ ದೇವಗಿರಿ ಎಕ್ಸಪ್ರೆಸ್ ರೈಲಿನಲ್ಲಿ ಮುಂಬೈನತ್ತ ಪ್ರಯಾಣ ಬೆಳೆಸಿದ್ದ ಮೆಹ್ಕರ್ ಕ್ಷೇತ್ರದ ಶಿವಸೇನಾ ಶಾಸಕ ಸಂಜಯ್ ರೈಮುಲ್ಕರ್, ಜಲ್ನಾ ರೈಲು ನಿಲ್ದಾಣದಲ್ಲಿ ಕಳ್ಳನೋರ್ವ ತಮ್ಮ ಮೊಬೈಲ್ ಫೋನ್ ಮತ್ತು ಸುಮಾರು 13 ಸಾವಿರ ರೂ. ದೋಚಿದ್ದಾಗಿ ದೂರು ದಾಖಲಿಸಿದ್ದಾರೆ.

ಸದ್ಯ ಇಬ್ಬರೂ ಶಾಸಕರ ದೂರನ್ನು ದಾಖಲಿಸಿರುವ ಪೊಲೀಸರು, ಪರಾರಿಯಾಗಿರುವ ಕಳ್ಳರ ಹುಡುಕಾಟದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.