ಬೆಂಗಳೂರು[ಜು.03]: ಸರ್ಕಾರ ಅಸ್ಥಿರಗೊಳಿಸುವಷ್ಟುಸಂಖ್ಯೆಯಲ್ಲಿ ಅತೃಪ್ತ ಶಾಸಕರು ಒಗ್ಗೂಡಿಲ್ಲ ಎಂಬ ಆತ್ಮವಿಶ್ವಾಸವೋ ಅಥವಾ ಅತೃಪ್ತಿ ಹೆಸರಿನಲ್ಲಿ ಬ್ಲಾಕ್‌ಮೇಲ್‌ ನಡೆಸುವ ಕೆಲ ಶಾಸಕರ ನಿಜ ಸ್ಥೈರ್ಯ ಪರೀಕ್ಷಿಸುವ ಉದ್ದೇಶವೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್‌ ನಾಯಕರು ಮಾತ್ರ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿರುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

ವಿಜಯನಗರ ಶಾಸಕ ಆನಂದಸಿಂಗ್‌ ಹಾಗೂ ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಅವರ ರಾಜೀನಾಮೆ ಘೋಷಣೆಯಾದ ನಂತರ ಅತೃಪ್ತರು ಎಂದು ಗುರುತಿಸಿಕೊಂಡಿರುವ ಶಾಸಕರೊಂದಿಗೆ ಒಂದು ಹಂತದ ಮಾತುಕತೆ ಮಾಡಿ, ಮನವೊಲಿಕೆ ಪ್ರಯತ್ನ ನಡೆಸಿದ್ದು ಬಿಟ್ಟರೆ ಕಾಂಗ್ರೆಸ್‌ ನಾಯಕರು ಈ ದಿಸೆಯಲ್ಲಿ ಹೆಚ್ಚಿನ ಪ್ರಯತ್ನಗಳನ್ನೇನೂ ನಡೆಸಿಲ್ಲ. ಅಲ್ಲದೆ, ಈ ಬಗ್ಗೆ ಚಿಂತಿತರೂ ಆದಂತಿಲ್ಲ. ಇದಕ್ಕೆ ಸ್ಪಷ್ಟನಿದರ್ಶನ ಇಂತಹ ಪ್ರಮುಖ ಬೆಳವಣಿಗೆಯ ನಡುವೆಯೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಸೋಮವಾರ ತಡರಾತ್ರಿ ಆರು ದಿನಗಳ ವಿದೇಶ ಯಾತ್ರೆಗೆ ತೆರಳಿದರು. ಇನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಂದಿನ ಕಾರ್ಯಕ್ರಮಗಳಲ್ಲಿ ಮಂಗಳವಾರ ತೊಡಗಿಕೊಂಡಿದ್ದು, ಬುಧವಾರ ಮೈಸೂರು ಜಿಲ್ಲಾ ಪ್ರವಾಸಕ್ಕೆ ಮುಂದಾಗಿದ್ದಾರೆ.

ಇದು ಸ್ಪಷ್ಟವಾಗಿ ಅತೃಪ್ತರ ರಾಜೀನಾಮೆಯು ಸರ್ಕಾರವನ್ನು ಆತಂಕಕ್ಕೆ ಒಡ್ಡುವುದಿಲ್ಲ ಎಂಬ ಕಾಂಗ್ರೆಸ್‌ ನಾಯಕರ ಆತ್ಮವಿಶ್ವಾಸದ ಪ್ರದರ್ಶನ ಎಂದೇ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅತೃಪ್ತರ ಬಣದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವಷ್ಟುಸಂಖ್ಯೆ ಹೆಚ್ಚಾಗುತ್ತಿಲ್ಲ. ಹಾಲಿ ಇಬ್ಬರು ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಹೆಚ್ಚು ಎಂದರೆ ಇನ್ನು ಇಬ್ಬರು-ಮೂವರು ರಾಜೀನಾಮೆ ನೀಡಬಹುದು. ಅದನ್ನು ಮೀರಿದ ಸಂಖ್ಯೆ ಅತೃಪ್ತರಿಗೆ ದೊರೆಯುವುದಿಲ್ಲ ಎಂಬ ನಂಬಿಕೆ ಕಾಂಗ್ರೆಸ್‌ ನಾಯಕರಲ್ಲಿ ಗಟ್ಟಿಯಾಗಿದೆ. ಹೀಗಾಗಿಯೇ ಈ ಬಗ್ಗೆ ಹೆಚ್ಚು ಆತಂಕಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೊಂದು ಮೂಲಗಳ ಪ್ರಕಾರ, ಅತೃಪ್ತರ ಪ್ರಹಸನ ಬಹಳ ದಿನಗಳಿಂದ ನಡೆಯುತ್ತಿದೆ. ಹೀಗಾಗಿ ನಿಜಕ್ಕೂ ಎಷ್ಟುಮಂದಿ ಅತೃಪ್ತರು ಇದ್ದಾರೆ ಮತ್ತು ಈ ಅತೃಪ್ತರ ಪೈಕಿ ಎಷ್ಟುಮಂದಿ ರಾಜೀನಾಮೆ ನೀಡುವಷ್ಟುಧೈರ್ಯ ತೋರುತ್ತಾರೆ ಎಂದು ಪರೀಕ್ಷಿಸುವ ಉದ್ದೇಶವೂ ಕಾಂಗ್ರೆಸ್‌ ನಾಯಕರಿಗೆ ಇದೆ ಎನ್ನಲಾಗುತ್ತಿದೆ. ಅತೃಪ್ತಿಯನ್ನು ಬ್ಲಾಕ್‌ಮೇಲ್‌ ಸಾಧನವಾಗಿ ಕೆಲ ಶಾಸಕರು ಬಳಸುತ್ತಿರುವುದರಿಂದ ಇಂತಹ ಶಾಸಕರ ನಿಜವಾದ ಸ್ಥೈರ್ಯವನ್ನು ಪರೀಕ್ಷಿಸುವ ಉದ್ದೇಶವೂ ನಾಯಕರಿಗೆ ಇದೆ ಎನ್ನಲಾಗುತ್ತಿದೆ. ಇದಲ್ಲದೆ, ಒಂದು ವೇಳೆ ದೊಡ್ಡ ಸಂಖ್ಯೆಯಲ್ಲಿ ರಾಜೀನಾಮೆಗೆ ಮುಂದಾಗುವ ಪರಿಸ್ಥಿತಿ ನಿರ್ಮಾಣವಾದರೆ ಆಗ ಮನವೊಲಿಕೆಗೆ ಗಂಭೀರ ಯತ್ನ ನಡೆಸೋಣ ಎಂಬ ಆಲೋಚನೆಯಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ ಎನ್ನಲಾಗುತ್ತಿದೆ.