ಪಾಕಿಸ್ತಾನದಲ್ಲಿ ಹೋಳಿ ಹಬ್ಬದ ವೇಳೆ ಇಬ್ಬರು ಹಿಂದು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ, ಇಸ್ಲಾಂಗೆ ಮತಾಂತರ ಮಾಡಿ ಮದುವೆ ಮಾಡಿಸಿರುವ ವಿಚಾರ ಬಾರೀ ವಿವಾದ ಸೃಷ್ಟಿ ಮಾಡಿದೆ.
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಹೋಳಿ ಹಬ್ಬದ ವೇಳೆ ಇಬ್ಬರು ಹಿಂದು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ, ಇಸ್ಲಾಂಗೆ ಮತಾಂತರ ಮಾಡಿ ಮದುವೆ ಮಾಡಿಸಿರುವ ವಿಷಯ ದೊಡ್ಡ ವಿವಾದವಾಗಿ ಪರಿಣಮಿಸಿದೆ. ಈ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ತನಿಖೆಗೆ ಆದೇಶಿಸಿದ್ದಾರೆ. ಈ ವಿಷಯದ ಬಗ್ಗೆ ಭಾರತ ಸರ್ಕಾರ ಕೂಡ ವರದಿ ಕೇಳಿದ್ದು, ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಹಾಗೂ ಪಾಕಿಸ್ತಾನದ ವಾರ್ತಾ ಸಚಿವರ ಮಧ್ಯೆ ಟ್ವೀಟರ್‌ನಲ್ಲಿ ಜಟಾಪಟಿಯೇ ನಡೆದಿದೆ.
ಹೋಳಿ ಹಬ್ಬದ ವೇಳೆ ಸಿಂಧ್ ಪ್ರಾಂತದ ಘೋಟ್ಕಿ ಜಿಲ್ಲೆಯಲ್ಲಿ ರವೀನಾ (13) ಹಾಗೂ ರೀನಾ (15) ಎಂಬ ಅಪ್ರಾಪ್ತ ಬಾಲಕಿಯರನ್ನು ಅವರ ಮನೆಯಿಂದ ‘ಪ್ರಭಾವಿ’ ವ್ಯಕ್ತಿಗಳು ಅಪಹರಿಸಿದ್ದಾರೆ. ಅಪಹರಣದ ನಂತರ ಮೌಲ್ವಿಯೊಬ್ಬರು ಅವರ ಮದುವೆ ಮಾಡಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ. ಇನ್ನೊಂದು ವಿಡಿಯೋದಲ್ಲಿ ಬಾಲಕಿಯರು ತಾವು ಸ್ವ ಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿರುವುದಾಗಿ ಹೇಳಿರುವುದೂ ವೈರಲ್ ಆಗಿದೆ. ಈ ಬಗ್ಗೆ ಪಾಕಿಸ್ತಾನದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಸ್ಲಾಮಾಬಾದ್‌ನಲ್ಲಿ ಅಲ್ಪಸಂಖ್ಯಾತ ಹಿಂದುಗಳು ಈ ಘಟನೆಯ ವಿರುದ್ಧ ಭಾನುವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ. ‘ಇದನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗಂಭೀರವಾಗಿ ಪರಿಗಣಿಸಿದ್ದು, ಸಿಂಧ್ ಹಾಗೂ ಪಂಜಾಬ್ ಸರ್ಕಾರಗಳು ತನಿಖೆ ನಡೆಸಿ, ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ’ ಎಂದು ವಾರ್ತಾ ಸಚಿವ ಫವಾದ್ ಚೌಧರಿ ತಿಳಿಸಿದ್ದಾರೆ.
ಟ್ವೀಟರ್‌ನಲ್ಲಿ ಭಾರತ-ಪಾಕ್ ಸಮರ:
ಈ ವಿಷಯದ ಬಗ್ಗೆ ಭಾರತವು ಪಾಕಿಸ್ತಾನದಲ್ಲಿರುವ ಹೈಕಮಿಷನರ್ ಅವರಿಂದ ವರದಿ ಕೇಳಿದೆ. ಅಪ್ರಾಪ್ತೆಯರ ಅಪಹರಣ, ಮದುವೆ ಹಾಗೂ ಮತಾಂತರದ ವರದಿಯನ್ನು ಲಗತ್ತಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್ ಅವರಿಂದ ಭಾನುವಾರ ವರದಿ ಕೇಳಿ ಟ್ವೀಟ್ ಮಾಡಿದರು. ಆದರೆ ಇದಕ್ಕೆ ಪಾಕಿಸ್ತಾನದ ವಾರ್ತಾ ಸಚಿವ ಚೌಧರಿ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿ, ಇದು ಪಾಕಿಸ್ತಾನದ ಆಂತರಿಕ ವಿಷಯ ಎಂದು ಹೇಳಿದರು. ಅದಕ್ಕೆ ತಿರುಗೇಟು ನೀಡಿದ ಸುಷ್ಮಾ, ‘ಮಿಸ್ಟರ್ ಮಿನಿಸ್ಟರ್, ನಾನು ಕೇವಲ ನಮ್ಮ ಹೈಕಮಿಷನರ್ ಅವರಿಂದ ವರದಿ ಕೇಳಿದ್ದೇನೆ. ಅಷ್ಟಕ್ಕೇ ನೀವು ಸಿಟ್ಟಾದಿರಿ. ಇದು ನಿಮ್ಮ ಪಾಪಪ್ರಜ್ಞೆಯನ್ನು ತೋರಿಸುತ್ತದೆ’ ಎಂದರು. ಅದಕ್ಕೆ ಮತ್ತೆ ಮಾರುತ್ತರ ನೀಡಿದ ಚೌಧರಿ, ‘ಮೇಡಂ ಮಿನಿಸ್ಟರ್, ಬೇರೆ ದೇಶಗಳಲ್ಲಿರುವ ಅಲ್ಪಸಂಖ್ಯಾತರ ಬಗ್ಗೆ ಕಳಕಳಿ ತೋರುವವರು ಭಾರತದ ಸರ್ಕಾರದಲ್ಲಿದ್ದಾರೆ ಎಂಬುದು ನಮಗೆ ಸಂತೋಷದ ವಿಷಯ. ನೀವು ನಿಮ್ಮ ದೇಶದಲ್ಲೂ ಇದೇ ರೀತಿ ಅಲ್ಪಸಂಖ್ಯಾತರ ಪರ ನಿಲ್ಲುತ್ತೀರೆಂದು ಭಾವಿಸುತ್ತೇನೆ. ಗುಜರಾತ್ ಹಾಗೂ ಜಮ್ಮು ನಿಮ್ಮ ಆತ್ಮವನ್ನು ತಟ್ಟಬೇಕಿದೆ’ ಎಂದು ಉದ್ಧಟತನ ಪ್ರದರ್ಶಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 25, 2019, 10:34 AM IST