ಬೆಂಗಳೂರು :  ಮದ್ಯ ಸೇವಿಸಿ ಚಾಲನೆ ಮಾಡುವವರನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಉತ್ತರ ಭಾರತೀಯ ಮೂಲದ ಇಬ್ಬರು ಆರೋಪಿಗಳನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಆದಿತ್ಯ (24) ಮತ್ತು ಹರಿಯಾಣ ಮೂಲದ ರಾಹುಲ್‌ ತ್ರಿಪಾಠಿ (22) ಬಂಧಿತರು. ಆರೋಪಿಗಳಿಂದ ಹಲ್ಲೆಗೊಳಗಾಗಿದ್ದ ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಠಾಣೆಯ ಸಿಬ್ಬಂದಿ ಅಶೋಕ್‌ ಮತ್ತು ನಂಜೇಗೌಡ ಎಂಬುವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಆರೋಪಿಗಳಿಬ್ಬರು ಖಾಸಗಿ ಕಂಪನಿಯೊಂದರಲ್ಲಿ ಇಂಟರ್ನರ್‌ಶಿಪ್‌ ಮಾಡುತ್ತಿದ್ದು, ಮಾರತ್‌ಹಳ್ಳಿಯಲ್ಲಿರುವ ಪಿ.ಜಿ.ಯಲ್ಲಿ ನೆಲೆಸಿದ್ದಾರೆ. ಆರೋಪಿಗಳು ಮೇ 3ರಂದು ಕಂಠಪೂರ್ತಿ ಮದ್ಯ ಸೇವಿಸಿ ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಠಾಣೆ ಮುಂಭಾಗ ಬೈಕ್‌ನಲ್ಲಿ ಹೋಗುತ್ತಿದ್ದರು. ಮದ್ಯ ಸೇವಿಸಿ ಚಾಲನೆ ಮಾಡುವವರ ತಪಾಸಣೆ ನಡೆಸುತ್ತಿದ್ದ ಎಎಸ್‌ಐ ನಾರಾಯಣಪ್ಪ, ಆರೋಪಿಗಳಿಗೆ ಬೈಕ್‌ ನಿಲ್ಲಿಸಿ ತಪಾಸಣೆ ನಡೆಸಿದ್ದರು. ಈ ವೇಳೆ ಅಲ್ಕೋ ಮೀಟರ್‌ನಲ್ಲಿ ಪರಿಶೀಲಿಸಿದಾಗ ಆರೋಪಿಗಳು ಮದ್ಯ ಸೇವಿರುವುದು ಬೆಳಕಿಗೆ ಬಂದಿತ್ತು. ನಾರಾಯಣಪ್ಪ ಅವರು ಬೈಕ್‌ ಚಾಲನೆ ಮಾಡಿದವರ ವಿರುದ್ಧ ದೂರು ದಾಖಲಿಸಲು ಮುಂದಾದಾಗ ಕೋಪಗೊಂಡ ಆರೋಪಿಗಳು, ಎಎಸ್‌ಐ ನಾರಾಯಣಪ್ಪ ಹಾಗೂ ಇಬ್ಬರು ಸಿಬ್ಬಂದಿಗೆ ನಿಂದಿಸಿ, ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದರು. ಅಲ್ಲಿಯೇ ಇದ್ದ ಮರದ ಕೋಲು ತೆಗೆದುಕೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು.

ಕೂಡಲೇ ಪೊಲೀಸರ ನೆರವಿಗೆ ಧಾವಿಸಿದ ಸ್ಥಳೀಯರು ಆರೋಪಿಗಳನ್ನು ಹಿಡಿದು ಥಳಿಸಿದ್ದಾರೆ. ನಂತರ ಇಬ್ಬರನ್ನು ಠಾಣೆಗೆ ಕರೆದೊಯ್ದು ಪೂರ್ವಾಪರ ವಿಚಾರ ಮಾಡುವ ವೇಳೆ ಠಾಣೆಯಲ್ಲಿ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಕಂಪ್ಯೂಟರ್‌ಗೆ ಅಳವಡಿಸಿದ್ದ ವೈಯರ್‌ಗಳನ್ನು ಕಿತ್ತುಹಾಕಿ ಅನುಚಿತ ವರ್ತನೆ ತೋರಿದ್ದಾರೆ. ಇದನ್ನು ಪ್ರಶ್ನಿಸಿದ ಠಾಣಾ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದರು. ಈ ಸಂಬಂಧ ಸಂಚಾರ ಠಾಣಾ ಸಿಬ್ಬಂದಿ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿ ನಾಶ, ಸರ್ಕಾರಿ ಕೆಲಸಕ್ಕೆ ಅಡ್ಡಿ ಆರೋಪ ಪ್ರಕರಣದಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.