ಬೆಂಗಳೂರು :  ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಸರ್ಕಾ​ರ​ವ​ನ್ನು ಅಸ್ಥಿರಗೊಳಿಸಲು ರಾಜ್ಯದಲ್ಲಿ ಎರಡು ತಂಡಗಳು ಕಾರ್ಯನಿರ್ವಹಿಸುತ್ತಿವೆ. ನಾವೇನೂ ಕಣ್ಮುಚ್ಚಿ ಕುಳಿತಿಲ್ಲ. ನಮ್ಮ ಕೆಲಸ ನಾವೂ ಮಾಡು​ತ್ತಿ​ದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸದಾಶಿವನಗರದ ತಮ್ಮ ಮನೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಕಿ ಇಲ್ಲದೆ ಹೊಗೆ ಬರುವುದಿಲ್ಲ ಎಂದು ನಮಗೆ ಗೊತ್ತಿದೆ. ನಡೆ​ಯು​ತ್ತಿ​ರುವ ಎಲ್ಲಾ ಬೆಳ​ವ​ಣಿ​ಗೆ​ಗ​ಳು ನಮ್ಮ ಗಮನದಲ್ಲಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.

ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅವರು ತಿಳಿದಿದ್ದಾರೆ. ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಬಿಜೆ​ಪಿಯ ಒಂದು ತಂಡಕ್ಕೆ ಅದೇ ಪಕ್ಷದ ಮತ್ತೊಂದು ತಂಡ ಏನು ಮಾಡು​ತ್ತಿದೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌ ಶಾಸಕರನ್ನು ಸೆಳೆಯುವುದರ ಬಗ್ಗೆ ಏನೂ ನಡೆದಿಲ್ಲ, ಆಡಿಯೋ ನಕಲಿ ಎಂದು ಹೇಳುತ್ತಿರುವ ಜಗದೀಶ್‌ ಶೆಟ್ಟರ್‌, ಸಿ.ಟಿ.ರವಿ ಮತ್ತು ಕೋಟ ಶ್ರೀನಿವಾಸ್‌ ಪೂಜಾರಿ ಅವರಿಗೆ ಆ ಪಕ್ಷದ ಮತ್ತೊಂದು ತಂಡ ಆಪರೇಷನ್‌ ಕಮಲ ಮಾಡಲು ಯತ್ನಿ​ಸು​ತ್ತಿ​ರುವ ಬಗ್ಗೆ ಮಾಹಿತಿಯೇ ಇಲ್ಲ. ಆದರೆ, ಸರ್ಕಾ​ರಕ್ಕೆ ಬಿಜೆ​ಪಿ​ಯಲ್ಲಿ ಏನು ನಡೆ​ಯುತ್ತಿದೆ. ಜನಾರ್ದನ ರೆಡ್ಡಿ ಅವರು ಯಾರನ್ನು ಭೇಟಿ ಮಾಡಲು ಬ್ರಿಗೇಡ್‌ ಟವರ್‌ಗೆ ಹೋಗಿದ್ದರು, ಜಿಂದಾಲ್‌ ಆಸ್ಪತ್ರೆಗೆ ಯಾರೆಲ್ಲಾ ಹೋಗಿ ಬಂದಿದ್ದಾರೆ ಎಂಬುದೂ ಸೇರಿ​ದಂತೆ ಎಲ್ಲಾ ಬೆಳ​ವ​ಣಿ​ಗೆ​ಗಳ ಬಗ್ಗೆ ಮಾಹಿತಿಯಿದೆ ಎಂದ​ರು.

ದುಬೈ ಮೂಲದ ಉದ್ಯಮಿಯೊಂದಿಗೆ ಮಾತನಾಡಿದಾತ ತಮ್ಮ ಆಪ್ತ ಸಹಾಯಕ ಅಲ್ಲ ಎಂದು ಶ್ರೀರಾ​ಮುಲು ಹೇಳು​ತ್ತಿ​ದ್ದಾರೆ. ಹಾಗಿ​ದ್ದರೆ, ಆ ವ್ಯಕ್ತಿ​ಯನ್ನು ಶ್ರೀರಾ​ಮುಲು ಏಕೆ ಇಟ್ಟುಕೊಂಡಿದ್ದಾರೆ ಎಂದು ಶಿವಕುಮಾರ್‌ ಈ ಸಂದ​ರ್ಭ​ದಲ್ಲಿ ಪ್ರಶ್ನಿ​ಸಿ​ದ​ರು.