ಕಳೆದ ಕೆಲವು ವರ್ಷಗಳಿಂದ ಪ್ರತ್ಯೇಕತವಾದಿ ಚೆಚೆನ್ಯಾ ಉಗ್ರಗಾಮಿಗಳು ರಷ್ಯಾದ್ಯಂತ ದಾಳಿಗಳನ್ನು ಎಸಗುತ್ತಾ ಬಂದಿದ್ದಾರೆ.

ಮಾಸ್ಕೋ(ಏ. 03): ರಷ್ಯಾದ ಸೇಂಟ್ ಪೀಟರ್ಸ್'ಬರ್ಗ್ ನಗರದ ಮೆಟ್ರೋ ಸ್ಟೇಷನ್'ನಲ್ಲಿ ಎರಡು ಸ್ಫೋಟ ಸಂಭವಿಸಿದ್ದು 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಕಾಲಮಾನದಲ್ಲಿ ಮಧ್ಯಾಹ್ನ 2:30ಕ್ಕೆ ಸೆನ್ನಾಯ ಪೋಷ್'ಚಾಡ್ ಸ್ಟೇಷನ್'ನಲ್ಲಿದ್ದ ಸಬ್'ವೇ ಕಾರುಗಳಲ್ಲಿ ಸ್ಫೋಟ ಸಂಭವಿಸಿವೆ ಎಂದು ರಷ್ಯಾದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬೆಲಾರಷ್ಯಾದ ಮುಖಂಡ ಅಲೆಕ್ಸಾಂಡರ್ ಲುಕಾಶೆಂಕೋ ಅವರನ್ನ ಭೇಟಿ ಮಾಡಲೆಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ನಗರಕ್ಕೆ ಆಗಮಿಸಿರುವ ಸಂದರ್ಭದಲ್ಲೇ ಸ್ಫೋಟ ಘಟನೆ ನಡೆದಿದೆ. ಸ್ಫೋಟಕ್ಕೆ ಏನು ಕಾರಣವೆಂಬುದು ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ. ಇದು ಉಗ್ರರ ಕೃತ್ಯವಿರಬಹುದೆಂಬ ಶಂಕೆ ಇದೆ.

ಕಳೆದ ಕೆಲವು ವರ್ಷಗಳಿಂದ ಪ್ರತ್ಯೇಕತವಾದಿ ಚೆಚೆನ್ಯಾ ಉಗ್ರಗಾಮಿಗಳು ರಷ್ಯಾದ್ಯಂತ ದಾಳಿಗಳನ್ನು ಎಸಗುತ್ತಾ ಬಂದಿದ್ದಾರೆ. 2010ರಲ್ಲಿ ಮಾಸ್ಕೋದ ಮೆಟ್ರೋ ರೈಲುಗಳಲ್ಲಿ ಮಹಿಳಾ ದಾಳಿಕೋರರು ಆತ್ಮಹತ್ಯಾ ಬಾಂಬ್ ದಾಳಿ ಎಸಗಿ 38ಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾಗಿದ್ದರು.