ಬೆಂಗಳೂರು[ಅ.06]: ಹಣಕಾಸು ಮಸೂದೆ ಅಂಗೀಕಾರಕ್ಕಾಗಿ ಮೂರು ದಿನಗಳ ಕಾಲ ಕರೆದಿರುವ ವಿಧಾನಮಂಡಲ ಅಧಿವೇಶನದ ಕಲಾಪದ ಚಿತ್ರೀಕರಣಕ್ಕೆ ನಿರ್ಬಂಧ ಹೇರಲು ವಿಧಾನಸಭೆ ಸಚಿವಾಲಯ ಚಿಂತನೆ ಹೊಂದಿರುವುದು ವಿವಾದಕ್ಕೆ ಕಾರಣವಾಗಿದೆ.

ಅ.10ರಿಂದ ಮೂರು ದಿನಗಳ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ಟೀವಿ ಕ್ಯಾಮರಾಗಳನ್ನು ಉಭಯ ಸದನದಿಂದ ಹೊರಗಿಡಲು ಸಭಾಧ್ಯಕ್ಷರು ಚಿಂತನೆ ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಪೀಕರ್‌ ಅವರು ಬುಧವಾರ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಲೋಕಸಭೆ ಮಾದರಿಯಲ್ಲಿ ಖಾಸಗಿ ವಾಹಿನಿಗಳಿಗೆ ಅವಕಾಶ ನೀಡದೇ, ಸರ್ಕಾರಿ ಚಾನಲ್‌ ಮೂಲಕ ಕಲಾಪ ಪ್ರಸಾರ ಮಾಡುವ ಚಿಂತನೆಯನ್ನು ಸ್ಪೀಕರ್‌ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಪೀಕರ್‌ ಅವರನ್ನು ಪತ್ರಿಕೆ ಸಂಪರ್ಕಿಸುವ ಪ್ರಯತ್ನ ಸಫಲವಾಗಲಿಲ್ಲ.