ಇಸ್ತಾಂಬುಲ್(ಅ.18): ವಿಶ್ವದ ದೊಡ್ಡಣ್ಣ ಅಮೆರಿಕ ಎಂದರೆ ಎಲ್ಲ ದೇಶಗಳೂ ನಡುಗುತ್ತವೆ. ಅಮೆರಿಕ ಅಧ್ಯಕ್ಷರ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತವೆ. ರೆಡ್ ಇಂಡಿಯನ್ನರ ಕೆಂಗೆಣ್ಣಿಗೆ ಗುರಿಯಾಗಿ ನಾಶವಾಗವುದು ಅದ್ಯಾರಿಗೆ ತಾನೇ ಇಷ್ಟ ಹೇಳಿ?.

ಆದರೆ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಮಾತ್ರ ಅಮೆರಿಕ ಅಧ್ಯಕ್ಷರ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಸಿರಿಯಾ ಮೇಲೆ ದಾಳಿ ಬೇಡ ಎಂಬ ಡೋನಾಲ್ಡ್ ಟ್ರಂಪ್ ಮನವಿ ಪತ್ರವನ್ನು ಎರ್ಡೋಗಾನ್ ಅಕ್ಷರಶಃ ಹರಿದು ಕಸದ ಬುಟ್ಟಿಗೆ ಎಸೆದಿದ್ದಾರಂತೆ.

ರಾತ್ರಿ ಹೇಳದೇ ಬರ್ತಿವಿ: ಟರ್ಕಿ ಅಧ್ಯಕ್ಷರ ಬೆದರಿಕೆ ಕೇಳಿ ಹೇಳ್ತಿವಿ!

ಹೌದು, ಸಿರಿಯಾದ ಖುರ್ದಿಷ್ ಹೋರಾಟಗಾರರ ಮೇಲೆ ಟರ್ಕಿ ದಾಳಿ ನಡೆಸುತ್ತಿದ್ದು, ದಾಳಿಗೆ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಅವರೇ ನೇರವಾಗಿ ಆದೇಶ ನೀಡಿದ್ದಾರೆ.

ಆದರೆ ಟರ್ಕಿಯ ಈ ನಡೆಯನ್ನು ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಖಂಡಿಸಿವೆ. ಐಸಿಸ್ ಉಗ್ರರ ವಿರುದ್ಧ ವಿರುದ್ಧ ಹೋರಾಡುತ್ತಿರುವ ಖುರ್ದಿಷ್ ಹೋರಾಟಗಾರರ ಮೇಲೆ ದಾಳಿ ಮಾಡುವುದು ಸರಿಯಲ್ಲ ಎಂಬುದು ವಿಶ್ವದ ಬಹುತೇಕ ರಾಷ್ಟ್ರಗಳ ಅಭಿಪ್ರಾಯವಾಗಿದೆ.

ಅದರಂತೆ ಟರ್ಕಿ ಸೇನೆಯ ಸಿರಿಯಾ ದಾಳಿಯನ್ನು ಅಮೆರಿಕ ಕೂಡ ಖಂಡಿಸಿದ್ದು, ಕೂಡಲೇ ದಾಳಿಯನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟರ್ಕಿ ಅಧ್ಯಕ್ಷ ಎರ್ಡೋಗಾನ್ ಅವರಿಗೆ ಪತ್ರ ಬರೆದಿದ್ದಾರೆ.

ಖುರ್ದಿಷ್ ಹೋರಾಟಗಾರರ ಮೇಲೆ ಇಂತಹ ಕಠೋರ ಮನೋಭಾವ ಬೇಡ ಎಂದು ಮನವಿ ಮಾಡಿದ್ದ ಟ್ರಂಪ್, ಐಸಿಸ್ ಪರ ನಿಲ್ಲುವ ದುಸ್ಸಾಹಸವೂ ಬೇಡ ಎಂದು ಎಚ್ಚರಿಕೆ ಕೂಡ ನೀಡಿದ್ದರು.

ಆದರೆ ಟ್ರಂಪ್ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಎರ್ಡೋಗಾನ್, ಪತ್ರವನ್ನು ಹರಿದು ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ಕುರಿತು ಖುದ್ದು ಟರ್ಕಿ ಅಧ್ಯಕ್ಷರ ಕಚೇರಿಯೆ ಸ್ಪಷ್ಟನೆ ನೀಡಿದೆ.

ಅಧ್ಯಕ್ಷ ಎರ್ಡೋಗಾನ್ ಈ ನಡೆ ಟರ್ಕಿ-ಅಮೆರಿಕ ನಡುವಿನ ಕಂದರವನ್ನು ಮತ್ತಷ್ಟು ಹೆಚ್ಚಿಸಿದ್ದು, ಹಗೆತನದ ಕಾರ್ಮೋಡ ಸ್ಪಷ್ಟವಾಗಿ ಗೋಚರವಾಗುತ್ತಿವೆ.

ಸಿರಿಯಾ ದಾಳಿ: ಟರ್ಕಿಗೆ ಬೆಂಬಲ ಸೂಚಿಸಿದ ಎಡಬಿಡಂಗಿ ಪಾಕಿಸ್ತಾನ!

ತನ್ನ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದ ಖುರದಿಷ್ ಹೋರಾಟಗಾರರನ್ನು ಸದೆಬಡಿಯಲು ಟರ್ಕಿ ನಿರ್ಧರಿಸಿದ್ದು, ಉತ್ತರ ಸಿರಿಯಾದ ಖುರ್ದಿಷ್ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದೆ. ಟರ್ಕಿಯ ಈ ನಡೆಯನ್ನು ಅಮೆರಿಕ, ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ವಿರೋಧಿಸಿದ್ದವು. ಆದರೆ ಪಾಕಿಸ್ತಾನ ಮಾತ್ರ ಟರ್ಕಿ ನಡೆಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.