ತುಮಕೂರು (ಜು. 03):  ತುಮಕೂರು ಲೋಕಸಭಾ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡಿದಲ್ಲಿ ಗೆಲ್ಲಿಸಿಕೊಂಡು ಬರುವುದಾಗಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಸಿ. ಚೆನ್ನಗಪ್ಪ ತಿಳಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಮನವಿ ಮಾಡಿರುವುದಾಗಿ ಹೇಳಿದರು. ಭವಾನಿ ರೇವಣ್ಣಗೆ ಟಿಕೆಟ್‌ ಕೊಟ್ಟರೆ ಹೇಗೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಭವಾನಿ ರೇವಣ್ಣಗೆ ಕೊಟ್ಟರೂ ಅಡ್ಡಿಯಿಲ್ಲ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾತು ಮಾತ್ರ ಸ್ವಲ್ಪ ಖಡಕ್‌, ಆದರೆ ಅವರ ಮನಸ್ಸು ಹೂವಿನಂತೆ ಕೋಮಲ ಎಂದು ಪ್ರಶಂಸಿಸಿದರು. ಇದೇ ವೇಳೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ಸ್ವಭಾವ ವರ್ಣಿಸಿದ ಚೆನ್ನಿಗಪ್ಪ, ‘ಕುಮಾರಣ್ಣ ಕೊಟ್ಟರೆ ವರ, ಇಟ್ಟರೆ ಶಾಪ’ ಇದ್ದ ಹಾಗೆ ಎಂದರು.