Asianet Suvarna News Asianet Suvarna News

ಸಿದ್ದರಾಮಯ್ಯ ವಿರೋಧಿಗಳ ಶೀತಲ ಸಮರ : ಹಿಡಿತ ತಪ್ಪಿಸಲು ಒಂದಾದ ನಾಯಕರು

ಸದ್ಯ ಶಾಸಕಾಂಗ ಪಕ್ಷ ಹಾಗೂ ಕೆಪಿಸಿಸಿ ಎರಡರ ಮೇಲೂ ಸಿದ್ದರಾಮಯ್ಯ ಅವರ ಬಣದ ಹಿಡಿತವಿದೆ. ಈ ಹಿಡಿತ ತಪ್ಪಿಸಬೇಕು ಎಂದು ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಒಂದಾಗಿದ್ದಾರೆ.

Tug Of War Between Siddaramaiah And Opposition Team
Author
Bengaluru, First Published Oct 3, 2019, 7:35 AM IST

ಎಸ್‌.ಗಿರೀಶ್‌ಬಾಬು

ಬೆಂಗಳೂರು [ಅ.03]:  ಕಾಂಗ್ರೆಸ್‌ ಪಕ್ಷದ ಮೇಲೆ ಹಿಡಿತ ಸಾಧಿಸಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ವಿರೋಧಿ ಬಣದ ನಡುವೆ ನಡೆಯುತ್ತಿರುವ ಶೀತಲ ಸಮರವು ಉಪ ಚುನಾವಣೆ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ನಿರ್ಮಾಣವಾಗಿದೆ.

ಸದ್ಯ ಶಾಸಕಾಂಗ ಪಕ್ಷ ಹಾಗೂ ಕೆಪಿಸಿಸಿ ಎರಡರ ಮೇಲೂ ಸಿದ್ದರಾಮಯ್ಯ ಅವರ ಬಣದ ಹಿಡಿತವಿದೆ. ಈ ಹಿಡಿತ ತಪ್ಪಿಸಬೇಕು ಎಂದು ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಒಂದಾಗಿದ್ದಾರೆ. ಈ ಗುಂಪು ಒಂದೋ ಪ್ರತಿಪಕ್ಷ ನಾಯಕನ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ತಪ್ಪಿಸಬೇಕು. ಇದು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲದಿಂದ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಮುಂದುವರೆಯುತ್ತಿರುವ ದಿನೇಶ್‌ ಗುಂಡೂರಾವ್‌ ಅವರನ್ನು ಬದಲಾಯಿಸಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದೆ.

ಇದಕ್ಕೆ ಸಿದ್ದರಾಮಯ್ಯ ಬಣ ಕೂಡ ಪ್ರತ್ಯಸ್ತ್ರ ಸಿದ್ಧಪಡಿಸಿಕೊಂಡಿದೆ. ವಿರೋಧಿ ಬಣದ ಮಾತು ಕೇಳಿ ಹೈಕಮಾಂಡ್‌ ಏನಾದರೂ ಈ ಪ್ರಮುಖ ಹುದ್ದೆಗಳನ್ನು ತಮಗೆ ತಪ್ಪಿಸಲು ಮುಂದಾದರೆ ಉಪ ಚುನಾವಣೆಯಲ್ಲಿ ತಟಸ್ಥರಾಗುವ ಸಂದೇಶವನ್ನು ರವಾನಿಸಿದೆ. ಪ್ರಮುಖ ಸ್ಥಾನಗಳ ಹೊಣೆ ಹೊರುವವರು ಉಪ ಚುನಾವಣೆಯ ಗೆಲುವಿನ ಹೊಣೆಯನ್ನು ಹೊರಬೇಕು ಎಂಬುದು ಸಿದ್ದರಾಮಯ್ಯ ಗುಂಪಿನ ನಿಲುವು ಎನ್ನಲಾಗುತ್ತಿದೆ.

ಪರಮೇಶ್ವರ್‌ಗೆ ಚಿಗುರಿದ ಕನಸು!:

ಕೆಪಿಸಿಸಿ ಹುದ್ದೆಗೆ ಪ್ರಮುಖ ದಾವೆದಾರರಾಗಿದ್ದ ಡಿ.ಕೆ. ಶಿವಕುಮಾರ್‌ ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಹಾಗೂ ಇಡೀ ಪಕ್ಷ ಕ್ರಮೇಣ ಸಿದ್ದರಾಮಯ್ಯ ಅವರ ಹಿಡಿತಕ್ಕೆ ಸಿಲುಕುತ್ತಿರುವ ಬಗ್ಗೆ ಪಕ್ಷದ ಹಲವು ನಾಯಕರು ಅಸಮಾಧಾನಗೊಂಡು ಒಗ್ಗೂಡತೊಡಗಿದ್ದಾರೆ. ಇದನ್ನು ಬಳಸಿಕೊಳ್ಳಲು ಸಜ್ಜಾಗಿರುವ ಪಕ್ಷದ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಮತ್ತೆ ಕೆಪಿಸಿಸಿ ಅಧ್ಯಕ್ಷರಾಗುವ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

ಪರಮೇಶ್ವರ್‌ ಅವರ ಆಪ್ತರಾದ ಜಿ.ಸಿ. ಚಂದ್ರಶೇಖರ್‌ ಅವರು ಕಾಂಗ್ರೆಸ್‌ ರಾಜ್ಯ ಸಭಾ ಸದಸ್ಯರು ಹಾಗೂ ವೀರಪ್ಪಮೊಯ್ಲಿ, ಬಿ.ಕೆ. ಹರಿಪ್ರಸಾದ್‌ ಮತ್ತು ಮುನಿಯಪ್ಪರಂತಹ ನಾಯಕರ ಬೆಂಬಲವನ್ನು ಈ ದಿಸೆಯಲ್ಲಿ ಒಗ್ಗೂಡಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಗುಂಪು ರಾಜ್ಯದ ಮತ್ತೊಬ್ಬ ಪ್ರಮುಖ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲವನ್ನು ಪಡೆಯಲು ತೀವ್ರ ಪ್ರಯತ್ನ ನಡೆಸಿದೆ. ಆದರೆ, ಖರ್ಗೆ ಸದ್ಯಕ್ಕೆ ಈ ವಿಚಾರದಲ್ಲಿ ತಟಸ್ಥ ಧೋರಣೆ ತಳೆದಿದ್ದಾರೆ ಎನ್ನಲಾಗುತ್ತಿದೆ.

ಇದೇ ವೇಳೆ ಎಚ್‌.ಕೆ. ಪಾಟೀಲ್‌ ನೇತೃತ್ವದಲ್ಲಿ ಮತ್ತೊಂದು ತಂಡ ಹೈಕಮಾಂಡ್‌ ಬಳಿ ಲಾಬಿ ನಡೆಸುವಲ್ಲಿ ಸಕ್ರಿಯವಾಗಿದ್ದು, ಪ್ರತಿಪಕ್ಷ ನಾಯಕನ ಸ್ಥಾನ ಈ ಬಾರಿ ಉತ್ತರ ಕರ್ನಾಟಕಕ್ಕೆ ಲಭಿಸಬೇಕು ಎಂದು ತೀವ್ರ ಲಾಬಿ ನಡೆಸಿದೆ. ಸಿದ್ದರಾಮಯ್ಯ ಅವರ ಬದಲಾಗಿ ಎಚ್‌.ಕೆ. ಪಾಟೀಲ್‌ ಅವರಿಗೆ ಈ ಪ್ರಮುಖ ಸ್ಥಾನ ನೀಡಬೇಕು ಎಂಬ ಒತ್ತಡ ಈ ತಂಡದ್ದು.

ದೆಹಲಿಗೆ ತೆರಳದಿರಲು ಸಿದ್ದು ತೀರ್ಮಾನ?:  ಹೀಗೆ ಎರಡು, ಮೂರು ಪ್ರತ್ಯೇಕ ಬಣಗಳು ತಮ್ಮ ವಿರುದ್ಧ ಹೈಕಮಾಂಡ್‌ನಲ್ಲಿ ಲಾಬಿ ನಡೆಸುತ್ತಿರುವುದರಿಂದ ಸಿದ್ದರಾಮಯ್ಯ ತಾವಾಗೇ ಹೈಕಮಾಂಡ್‌ ಅನ್ನು ಯಾವ ಹುದ್ದೆಯನ್ನು ಕೇಳದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ದೆಹಲಿಗೆ ಹೋಗಿದ್ದಾಗ ಸೋನಿಯಾ ಗಾಂಧಿ ಭೇಟಿ ಮಾಡಲು ಸಮಯಾವಕಾಶ ದೊರೆಕಿರಲಿಲ್ಲ. ಶೀಘ್ರವೇ ಮತ್ತೊಂದು ಬಾರಿ ದೆಹಲಿಗೆ ತೆರಳಿ ಸೋನಿಯಾ ಅವರನ್ನು ಭೇಟಿ ಮಾಡುವ ಮನಸ್ಥಿತಿಯಲ್ಲಿದ್ದ ಸಿದ್ದರಾಮಯ್ಯ ಅವರು ಬಣ ರಾಜಕಾರಣ ಆರಂಭವಾಗುತ್ತಿದ್ದಂತೆಯೇ ಹೈಕಮಾಂಡ್‌ ತಾನಾಗೇ ಆಹ್ವಾನ ನೀಡದಿದ್ದರೆ ದೆಹಲಿಗೆ ತೆರಳದಿರಲು ತೀರ್ಮಾನಿಸಿದ್ದಾರೆ ಎಂದು ಅವರ ಆಪ್ತ ಬಣ ತಿಳಿಸಿದೆ.

ಸದನದ ಹೊರಗೆ ಹಾಗೂ ಒಳಗೆ ಪಕ್ಷದ ಪರ ಹೋರಾಟ ನಡೆಸಬೇಕು ಎಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಬಾರದು ಹಾಗೂ ಪ್ರತಿಪಕ್ಷ ಸ್ಥಾನ ಸಹಜವಾಗಿ ತಮಗೆ ದೊರೆಯಬೇಕು. ಒಂದು ವೇಳೆ ಹೈಕಮಾಂಡ್‌ ಇತರರನ್ನು ಈ ಹುದ್ದೆಗಳಿಗೆ ಪರಿಗಣಿಸಿದರೆ ಆಗ ಅಂತಹ ಹುದ್ದೆ ಪಡೆದವರು ಉಪ ಚುನಾವಣೆಯಲ್ಲಿ ಪಕ್ಷವನ್ನು ಮುನ್ನೆಡೆಸುವ ಹೊಣೆ ಹೊರಲಿ ಎಂಬ ನಿಲುವಿಗೆ ಸಿದ್ದರಾಮಯ್ಯ ಬಂದಿದೆ ಎನ್ನಲಾಗುತ್ತಿದೆ.

ಅಂದರೆ, ಅಗತ್ಯವಿರುವ ಹಾಗೂ ತಮ್ಮ ಬೆಂಬಲಿಗರಿರುವ ಕಡೆ ಮಾತ್ರ ಪ್ರಚಾರದಲ್ಲಿ ತೊಡಗಿಕೊಂಡು ಉಳಿದಂತೆ ಪಕ್ಷವನ್ನು ಮುನ್ನಡೆಸುವ ಹೊಣೆಯನ್ನು ಹೊಸದಾಗಿ ಹುದ್ದೆ ವಹಿಸಿಕೊಳ್ಳುವವರಿಗೆ ಬಿಟ್ಟು ಮುಗುಂ ಆಗಿ ಉಳಿದುಕೊಳ್ಳುವ ಕಾರ್ಯತಂತ್ರ ಅನುಸರಿಸಲು ಸಿದ್ದರಾಮಯ್ಯ ಬಣ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.

ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚಚರ್ಚೆ: ದಿನೇಶ್‌ ಇಂದು ದಿಲ್ಲಿಗೆ

ಕಾಂಗ್ರೆಸ್‌ನ ವಿವಿಧ ಬಣ ರಾಜಕಾರಣದ ತೀವ್ರತೆ ಬಗ್ಗೆ ಹೈಕಮಾಂಡ್‌ಗೆ ಮನನ ಮಾಡಿಕೊಡಲು ಹಾಗೂ ವಿಧಾನಮಂಡಲ ಅಧಿವೇಶನ ಆರಂಭವಾಗುವ ಮುನ್ನ ಎರಡು ಸದನಗಳ ಪ್ರತಿಪಕ್ಷ ನಾಯಕ ಹಾಗೂ ಮುಖ್ಯ ಸಚೇತಕ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಹೈಕಮಾಂಡ್‌ ಜತೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗುರುವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ.

ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರ ಸೂಚನೆ ಹಿನ್ನೆಲೆಯಲ್ಲಿ ದಿನೇಶ್‌ ಗುಂಡೂರಾವ್‌ ಅವರು ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಅವರು ವಿಧಾನಮಂಡಲ ಅಧಿನವೇಶನ ಅ. 10ರಿಂದ ಆರಂಭವಾಗಲಿರುವುದರಿಂದ ಪ್ರತಿಪಕ್ಷ ಹುದ್ದೆಗೆ ನೇಮಕ ಮಾಡಬೇಕು. ಹೀಗಾಗಿ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಹೈಕಮಾಂಡ್‌ ಅನ್ನು ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios