ಅಗಸ್ಟಾ ಡೈರಿಯಲ್ಲಿ ಹಲವೆಡೆ ಆ ಒಂದು ಹೆಸರು ಪ್ರಸ್ತಾಪ| ಯಾರು ಆ ವ್ಯಕ್ತಿ? ತನಿಖೆ ಚುರುಕು 

ನವದೆಹಲಿ[ಏ.04]: ಯುಪಿಎ ಅವಧಿಯಲ್ಲಿ ವಿವಿಐಪಿ ಹೆಲಿಕಾಪ್ಟರ್‌ ಅಗಸ್ಟಾವೆಸ್ಟ್‌ಲ್ಯಾಂಡ್‌ ಖರೀದಿಯಲ್ಲಿ ನಡೆದ ಹಗರಣದ ತನಿಖೆ ವೇಳೆ ಪದೇ ಪದೇ ‘ಆರ್‌ಜಿ’ ಎಂಬ ಹೆಸರು ಪತ್ತೆಯಾಗಿದೆ. ಈ ಹೆಸರು ಯಾರನ್ನು ಕುರಿತು ದಾಖಲಿಸಿದ್ದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ದಿಲ್ಲಿ ಕೋರ್ಟ್‌ಗೆ ತಿಳಿಸಿದೆ.

ಬುಧವಾರ ವಿಚಾರಣೆ ವೇಳೆ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದ ಇಡಿ ಪರ ವಕೀಲರು, ಪ್ರಕರಣ ಸಂಬಂಧ ಬಂಧಿತ ಸುಶೇಶ್‌ ಮೋಹನ್‌ ಗುಪ್ತಾಗೆ ಸೇರಿದ ಡೈರಿಯಲ್ಲಿ ಆರ್‌ಜಿ ಎಂಬುವರಿಗೆ 50 ಕೋಟಿ ರು.ಗಿಂತ ಹೆಚ್ಚು ಹಣ ನೀಡಲಾಗಿದೆ ಎಂದು ಉಲ್ಲೇಖವಾಗಿದೆ. ಈ ಆರ್‌ಜಿ ಎಂದರೆ ಯಾರು ಎಂಬುದನ್ನು ನಾವು ಪತ್ತೆ ಮಾಡಲು ಯತ್ನಿಸುತ್ತಿದ್ದೇವೆ. ಗುಪ್ತಾ ಅವರು ಉದ್ದೇಶಪೂರ್ವಕವಾಗಿಯೇ ಆರ್‌ಜಿ ಎಂದರೆ ರಜತ್‌ ಗುಪ್ತಾ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಗುಪ್ತಾ ಅವರು ತನಿಖೆ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಆರ್‌ಜಿ ಎಂದರೆ ರಾಹುಲ್‌ ಗಾಂಧಿ ಎಂದು ಈ ಹಿಂದೆ ಬಿಜೆಪಿ ಆರೋಪಿಸಿತ್ತು.