ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಸಿರಿಯನ್ ಸೇನೆಯು ವಿಷಾನಿಲ ಪ್ರಯೋಗಿಸಿದ್ದು, ಅದಕ್ಕೆ ಪ್ರತಿಯಾಗಿ ಪೂರ್ವ ಮೆಡಿಟೇರಿನಿಯನ್ ಸಮುದ್ರದಿಂದ ಅಮೆರಿಕಾವು ಕ್ರೂಸ್ ಮಿಸೈಲ್’ಗಳನ್ನು ಪ್ರಯೋಗಿಸಿದೆ, ಎಂದು ಅಮೆರಿಕನ್ ಅಧಿಕಾರಿಗಳು ಹೇಳಿದ್ದಾರೆ.
ವಾಷಿಂಗ್ಟನ್ (ಏ. 07): ಸಿರಿಯನ್ ವಾಯುನೆಲೆಯ ಮೇಲೆ ಕ್ಷಿಪಣಿ ದಾಳಿಗೆ ಆದೇಶಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಿರಿಯಾ ತನ್ನ ವಾಯುನೆಲೆಗಳಿಂದ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದೆ ಎಂದು ಆರೋಪಿಸಿರುವ ಟ್ರಂಪ್, ಸಿರಯಾ ಅಧ್ಯಕ್ಷ ಬಶರ್ ಅಲ್ ಅಸದ್ ತಮ್ಮ ವರ್ತನೆಯನ್ನು ತಿದ್ದಿಕೊಳ್ಳಲು ವಿಫಲರಾಗಿದ್ದಾರೆ. ಅಮೆರಿಕಾದ ಸುರಕ್ಷತೆಯ ದೃಷ್ಟಿಯಿಂದ ಅವರ ವಿರುದ್ಧ ಕ್ರಮ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.
ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಸಿರಿಯನ್ ಸೇನೆಯು ವಿಷಾನಿಲ ಪ್ರಯೋಗಿಸಿದ್ದು, ಅದಕ್ಕೆ ಪ್ರತಿಯಾಗಿ ಪೂರ್ವ ಮೆಡಿಟೇರಿನಿಯನ್ ಸಮುದ್ರದಿಂದ ಅಮೆರಿಕಾವು ಕ್ರೂಸ್ ಮಿಸೈಲ್’ಗಳನ್ನು ಪ್ರಯೋಗಿಸಿದೆ, ಎಂದು ಅಮೆರಿಕನ್ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಟ್ರಂಪ್ ವಿದೇಶಾಂಗ ವ್ಯವಹಾರಗಳಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಟ್ರಂಪ್ ಈ ಕ್ರಮವು ಇರಾನ್ ಹಾಗೂ ರಷ್ಯಾವನ್ನು ಕೆರಳಿಸುವ ಸಾದ್ಯತೆಗಳಿವೆ ಎನ್ನಲಾಗಿದೆ. ಕಳೆದ ಆರು ವರ್ಷಗಳಿಂದ ಸಿರಿಯಾದಲ್ಲಿ ನಾಗರಿಕ ದಂಗೆ ನಡೆಯುತ್ತಿದ್ದು ಇರಾನ್ ಹಾಗೂ ರಷ್ಯಾ ಅಧ್ಯಕ್ಷ ಅಸದ್ ಬೆಂಬಲಕ್ಕೆ ನಿಂತಿವೆ.
ಖಾನ್ ಶೇಖೌನ್ ಎಂಬ ಪಟ್ಟಣದಲ್ಲಿ ಕಳೆದ ವಾರ ಸಿರಿಯಾ ಸೇನೆಯು ಪ್ರಯೋಗಿಸಿದೆನ್ನಲಾದ ವಿಷಾನಿಲ ದಾಳಿಗೆ ಮಕ್ಕಳು ಸೇರಿದಂತೆ ಸುಮಾರು 70 ಮಂದಿ ಪ್ರಾಣತೆತ್ತಿದ್ದಾರೆ. ಆದರೆ ಸಿರಿಯಾ ಸರ್ಕಾರವು ವಿಷಾನಿಲ ಬಳಕೆಯನ್ನು ಅಲ್ಲಗಳೆದಿದೆ.
ಈಗ ಅಮೆರಿಕಾ ನಡೆಸಿರುವ ಕ್ಷಿಪಣಿ ದಾಳಿಯಿಂದ ರಾಸಾಯನಿಕ ಅಸ್ತ್ರ ಬಳಸುವ ಸಿರಿಯಾದ ಸಾಮರ್ಥ್ಯಕ್ಕೆ ಭಾರೀ ಪೆಟ್ಟುಬಿದ್ದಿದೆಯೆಂದು ಮೇಲ್ನೋಟಕ್ಕೆ ತಿಳಿದುಬಂದಿದೆಯೆಂದು ಪೆಂಟಗಾನ್ ವಕ್ತಾರ ಹೇಳಿದ್ದಾರೆ.
