ನೂತನವಾಗಿ ಜಾರಿಗೊಳ್ಳುವ ಕಾನೂನಿನಂತೆ ಹೆಚ್-1ಬಿ ವೀಸಾಗಾಗಿ ಅರ್ಜಿ ಸಲ್ಲಿಸಿರುವವರು, ಅರ್ಜಿ ಪೂರ್ಣಗೊಳ್ಳುವವರೆಗೂ ಅಮೆರಿಕಾದಲ್ಲಿ ಇರುವಂತಿಲ್ಲ.
ವಾಷಿಂಗ್ಟ್'ನ್(ಜ.03): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಜಾರಿಗೊಳಿಸಲು ಹೊರಟಿರುವ ಹೆಚ್-1ಬಿ ವೀಸಾ ನಿಯಮಾವಳಿ ಬದಲಾವಣೆ ನೀತಿಯಿಂದ ಅಮೆರಿಕಾದಲ್ಲಿ ಕೆಲಸ ಮಾಡುವ 5 ಲಕ್ಷ ಭಾರತೀಯರಿಗೆ ತೊಂದರೆಯುಂಟಾಗಲಿದೆ.
ಟ್ರಂಪ್ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ' ''ಅಮೆರಿಕನ್'ರಿಂದ ಖರೀದಿಸಿ,ಅಮೆರಿಕನ್'ನನ್ನು ನೇಮಿಸಿಕೊಳ್ಳಿ'' ನೀತಿಯಿಂದ ಯುಎಸ್'ಎ'ನಲ್ಲಿ ಕಾರ್ಯ ನಿರ್ವಹಿಸುವ ಲಕ್ಷಾಂತರ ಭಾರತೀಯ ಸಾಫ್ಟ್'ವೇರ್ ಇಂಜಿನಿಯರ್'ಗಳು ಸ್ವದೇಶಕ್ಕೆ ಮರಳುವ ಪರಿಸ್ಥಿತಿ ಎದುರಾಗಲಿದೆ. ಟ್ರಂಪ್'ನ ಹೊಸ ನೀತಿಯು ಅಮೆರಿಕಾದಲ್ಲಿ ಶಾಶ್ವತ ನಾಗರಿಕರಾಗಿ ಉಳಿಯಬಯಸುವ ಅಥವಾ ಗ್ರೀನ್ ಕಾರ್ಡ್'ಗಾಗಿ ಕಾಯುತ್ತಿರುವ 5 ಲಕ್ಷ ಭಾರತೀಯರಿಗೆ ತೊಂದರೆಯಾಗಲಿದೆ.
ಬಾಕಿಯುಳಿದಿರುವ ಅರ್ಜಿದಾರರು ಇರುವಂತಿಲ್ಲ
ನೂತನವಾಗಿ ಜಾರಿಗೊಳ್ಳುವ ಕಾನೂನಿನಂತೆ ಹೆಚ್-1ಬಿ ವೀಸಾಗಾಗಿ ಅರ್ಜಿ ಸಲ್ಲಿಸಿರುವವರು, ಅರ್ಜಿ ಪೂರ್ಣಗೊಳ್ಳುವವರೆಗೂ ಅಮೆರಿಕಾದಲ್ಲಿ ಇರುವಂತಿಲ್ಲ. ಪ್ರಸ್ತುತ ಕಾನೂನಿನಂತೆ ಹೆಚ್-1ಬಿ ವೀಸಾ ಅವಧಿ 6 ವರ್ಷಗಳ ಅವಧಿಯದ್ದಾಗಿದ್ದು, ಈ ಅವಧಿ ಪುರ್ಣಗೊಂಡ ನಂತರ ಅರ್ಜಿಗಳು ಬಾಕಿಯುಳಿದಿದ್ದರೆ ವಾಪಸ್ ಸ್ವದೇಶಕ್ಕೆ ಹಿಂತಿರುಗಬೇಕು.
ಬಹುತೇಕ ಹೆಚ್-1ಬಿ ವೀಸಾಗಳನ್ನು ಭಾರತೀಯ ಐಟಿ ಪದವೀಧರರು ಬಳಸುತ್ತಾರೆ. ನೂತನ ಕಾನೂನಿನ ಅನ್ವಯ ಬಾಕಿಯುಳಿದಿರುವ ಅರ್ಜಿಗಳನ್ನು ಪುನರ್ ನವೀಕರಿಸಲಾಗುವುದಿಲ್ಲ. 2016ರ ಚುನಾವಣೆಯಲ್ಲಿ ಟ್ರಂಪ್ ಆಡಳಿತ ನೀಡಿದ ಆಶ್ವಾಸನೆಯಂತೆ ಅಲ್ಲಿನ ಕಂಪನಿಗಳು ಅಮೆರಿಕನ್ನರಿಗೆ ಮಾತ್ರ ಉದ್ಯೋಗ ನೀಡಬೇಕಾಗುತ್ತದೆ.
