ವಾಷಿಂಗ್ಟನ್‌: ಅಮೆರಿಕಕ್ಕೆ ಎಚ್‌1-ಬಿ ವೀಸಾದಡಿ ಬಂದು ನೆಲೆಸಿರುವವರ ಸಂಗಾತಿಗೆ ಅಮೆರಿಕದಲ್ಲಿ ನೌಕರಿ ಮಾಡಲು ನೀಡಲಾಗಿರುವ ಪರವಾನಗಿಯನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚಿಂತನೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಈ ವರ್ಷದ ಬೇಸಿಗೆಯ ಕೊನೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ಸಂಸದರಿಗೆ ವಲಸೆ ವಿಭಾಗದ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಚ್‌1-ಬಿ ವೀಸಾದಾರರ ಸಂಗಾತಿಗಳು ಎಚ್‌-4 ವೀಸಾದಡಿ ಅಮೆರಿಕಕ್ಕೆ ಬಂದು ನೆಲೆಸಿದ್ದಾರೆ. 2005ರಲ್ಲಿ ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ ಇವರಿಗೂ ಕೆಲಸ ಮಾಡಲು ಪರವಾನಗಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಸುಮಾರು 71000 ಎಚ್‌-4 ವೀಸಾದಾರರು ಅಮೆರಿಕದಲ್ಲಿ ನೌಕರಿ ಮಾಡುತ್ತಿದ್ದಾರೆ. ಇವರಲ್ಲಿ ಶೇ.93ರಷ್ಟುಮಂದಿ ಭಾರತೀಯರಾಗಿದ್ದು, ಶೇ.94ರಷ್ಟುಮಹಿಳೆಯರು ಎಂದು ಅಂಕಿಅಂಶಗಳು ಹೇಳುತ್ತವೆ. ಟ್ರಂಪ್‌ ಆದೇಶ ಜಾರಿಗೊಂಡ ನಂತರ ಇವರೆಲ್ಲರ ಕೆಲಸ ಹೋಗಲಿದೆ.

ಎಚ್‌1-ಬಿ ವೀಸಾದಾರರ ಪತ್ನಿಯರು ಕೂಡ ಹೆಚ್ಚಾಗಿ ಉನ್ನತ ಶಿಕ್ಷಣ ಪಡೆದವರೇ ಆಗಿರುತ್ತಾರೆ. ಆದರೆ, ಹಿಂದೆಲ್ಲ ಅವರಿಗೆ ಕೆಲಸ ಮಾಡಲು ಅನುಮತಿ ಇರಲಿಲ್ಲ. ಒಬಾಮಾ ಸರ್ಕಾರ ಅನುಮತಿ ನೀಡಿದ ಮೇಲೆ ಅವರೆಲ್ಲ ಕೆಲಸಕ್ಕೆ ಸೇರಿದ್ದು, ಇದರಿಂದ ಸ್ಥಳೀಯ ಅಮೆರಿಕನ್ನರಿಗೆ ಕೆಲಸ ಸಿಗುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಇವರಿಗೆ ನೀಡಿರುವ ಕೆಲಸದ ಪರ್ಮಿಟ್‌ ವಾಪಸ್‌ ಪಡೆಯುವುದಾಗಿ ಡೊನಾಲ್ಡ್‌ ಟ್ರಂಪ್‌ ತಮ್ಮ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿದ್ದರು. ಅದನ್ನೀಗ ಜಾರಿಗೊಳಿಸುತ್ತಿದ್ದಾರೆ.