ನವದೆಹಲಿ[ಜೂ.23]: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ ರಾಬರ್ಟ್‌ ವಾದ್ರಾ ಅವರಿಗೆ ಯುಪಿಎ ಕಾಲದಲ್ಲಿ ನಡೆದಿದ್ದ ವಿಮಾನ ಖರೀದಿ ಅಕ್ರಮವೊಂದು ಬಲವಾಗಿ ಸುತ್ತಿಕೊಳ್ಳುವ ಲಕ್ಷಣಗಳು ಕಾಣಿಸಲು ಆರಂಭಿಸಿವೆ. 2009ರಲ್ಲಿ 2895 ಕೋಟಿ ರು. ವ್ಯಯಿಸಿ 75 ಪಿಲಾಟಸ್‌ ತರಬೇತಿ ವಿಮಾನ ಖರೀದಿಸಿದ ವ್ಯವಹಾರದಲ್ಲಿ ನಡೆದಿರುವ ಲಂಚಾವತಾರ ಸಂಬಂಧ ವಿವಾದಿತ ಶಸ್ತ್ರಾಸ್ತ್ರ ವ್ಯಾಪಾರಿ ಹಾಗೂ ವಾದ್ರಾ ಆಪ್ತ ಸಂಜಯ್‌ ಭಂಡಾರಿ ಮತ್ತಿತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಬೆನ್ನಲ್ಲೇ ಭಂಡಾರಿಗೆ ಸೇರಿದ ವಿವಿಧ ಸ್ಥಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ.

ಈ ಪ್ರಕರಣದಲ್ಲಿ ವಾಯುಪಡೆ, ರಕ್ಷಣಾ ಸಚಿವಾಲಯ ಹಾಗೂ ಸ್ವಿಜರ್ಲೆಂಡ್‌ ಮೂಲದ ಪಿಲಾಟಸ್‌ ವಿಮಾನ ಕಂಪನಿಯ ಅಪರಿಚಿತ ವ್ಯಕ್ತಿಗಳನ್ನೂ ಸಿಬಿಐ ಹೆಸರಿಸಿದೆ. ಎಫ್‌ಐಆರ್‌ನಲ್ಲಿ ರಾಬರ್ಟ್‌ ವಾದ್ರಾ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಾದ್ರಾರನ್ನು ಈ ಹಿಂದೆ ವಿಚಾರಣೆಗೆ ಗುರಿಪಡಿಸಿತ್ತು. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸಿಬಿಐ ತನಿಖೆಯಿಂದ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?

2009ರಲ್ಲಿ ಭಾರತೀಯ ವಾಯು ಪಡೆಗೆ ತರಬೇತಿ ವಿಮಾನ ಖರೀದಿಸುವ ಸಂಬಂಧ ಯುಪಿಎ ಸರ್ಕಾರ ಟೆಂಡರ್‌ ಆಹ್ವಾನಿಸಿತ್ತು. ಈ ಗುತ್ತಿಗೆಯನ್ನು ಪಡೆದುಕೊಳ್ಳುವ ಸಲುವಾಗಿ ಸ್ವಿಜರ್‌ಲೆಂಡ್‌ ಮೂಲದ ಪಿಲಾಟಸ್‌ ಕಂಪನಿ, ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್‌ ಭಂಡಾರಿ ಒಡೆತನದ ಕಂಪನಿಗೆ 339 ಕೋಟಿ ರು. ಕಿಕ್‌ ಬ್ಯಾಕ್‌ ನೀಡಿದೆ ಎಂದು ಆರೋಪಿಸಲಾಗಿದೆ. 2,896 ಕೋಟಿ ರು. ವೆಚ್ಚದಲ್ಲಿ 75 ಪಿಲಾಟಸ್‌ ತರಬೇತಿ ವಿಮಾನವನ್ನು ಪೂರೈಸುವ ಒಪ್ಪಂದವನ್ನು ಪಡೆದುಕೊಳ್ಳುವಲ್ಲಿ ಪಿಲಾಟಸ್‌ ಕಂಪನಿ 2012ರಲ್ಲಿ ಯಶಸ್ವಿಯಾಗಿತ್ತು. ಈ ಖರೀದಿ ಒಪ್ಪಂದಲ್ಲಿ ಸಂದಾಯವಾದ ಕಿಕ್‌ಬ್ಯಾಕ್‌ ಹಣದಿಂದ ಲಂಡನ್‌ನಲ್ಲಿ ರಾಬರ್ಟ್‌ ವಾದ್ರಾ ಬೇನಾಮಿ ಹೆಸರಿನಲ್ಲಿ ಬಂಗಲೆ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ.