ತ್ರಿವಳಿ ತಲಾಖ್ ಮಸೂದೆಗೆ ಲೋಕಸಭೆಯ ಒಪ್ಪಿಗೆ | ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆಗೆ ಒತ್ತು ನೀಡುವ ತ್ರಿವಳಿ ತಲಾಖ್ ವಿಧೇಯಕ| ವಿಧೇಯಕಕ್ಕೆ ಧ್ವನಿಮತದ ಮೂಲಕ ಅಂಗೀಕಾರ| ಚರ್ಚೆ ಮಧ್ಯೆ ಸಭಾತ್ಯಾಗ ಮಾಡಿದ ಕಾಂಗ್ರೆಸ್ ಸದಸ್ಯರು| ವಿಧೇಯಕ ಪರವಾಗಿ 245 ಮತ, ವಿರುದ್ಧವಾಗಿ 11 ಮತ
ನವದೆಹಲಿ(ಡಿ.27): ಮಹತ್ವದ ಬೆಳವಣಿಗೆಯೊಂದರಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ. ಈ ಮೂಲಕ ತ್ರಿವಳಿ ತಲಾಖ್‌ನಿಂದ ನರಳುತ್ತಿದ್ದ ಸಾವಿರಾರು ಮುಸ್ಲಿಂ ಮಹಿಳೆಯರ ರಕ್ಷಣೆಗೆ ಲೋಕಸಭೆ ಮುಂದಾಗಿದೆ.
ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆಗೆ ಒತ್ತು ನೀಡುವ ತ್ರಿವಳಿ ತಲಾಖ್ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ಚಳಿಗಾಲದ ಅಧಿವೇಶನದ ಕಲಾಪದಲ್ಲಿ ತ್ರಿವಳಿ ತಲಾಖ್ ವಿಧೇಯಕ ಮಂಡಿಸಲಾಯಿತು. ಈ ಕುರತಾದ ನಿರಂತರ ಚರ್ಚೆಯ ನಂತರ ವಿಧೇಯಕಕ್ಕೆ ಧ್ವನಿಮತದ ಮೂಲಕ ಅಂಗೀಕಾರ ದೊರೆಯಿತು.
ಚರ್ಚೆ ವೇಳೆ ಕಾಂಗ್ರೆಸ್ ಮತ್ತು ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ಆರ್‌ಜೆಡಿ ಸದಸ್ಯರು ಸಭಾತ್ಯಾಗ ಮಾಡಿದರು. ತದನಂತರ ವಿಧೇಯಕವನ್ನು ಮತಕ್ಕೆ ಹಾಕಿದಾಗ ವಿಧೇಯಕ ಪರವಾಗಿ 245 ಮತ ಹಾಗೂ ವಿಧೇಯಕದ ವಿರುದ್ಧವಾಗಿ ಕೇವಲ 11 ಮತ ಬಂದವು.
ತ್ರಿವಳಿ ತಲಾಕ್ ತಡೆ ಕಾಯ್ದೆಯು ಯಾವುದೇ ಧರ್ಮ ಅಥವಾ ಸಮುದಾಯದ ವಿರೋಧಿಯಲ್ಲ. ಮಹಿಳೆಯರ ರಕ್ಷಣೆ ಮತ್ತು ಗೌರವದ ಪ್ರತೀಕವಾಗಿದೆ. ಹೀಗಿರುವಾಗ ಎಲ್ಲರೂ ಅದನ್ನು ಬೆಂಬಲಿಸಬೇಕು ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈ ವೇಳೆ ಪ್ರತಿಪಾದಿಸಿದರು.
