-ಮುಸ್ಲಿಂ ಮಹಿಳಾ ವಿರೋಧಿ ತ್ರಿವಳಿ ತಲಾಖ್ ಅನ್ನು ಅಪರಾಧವೆನ್ನುವ ಮಸೂದೆ ಮಂಡನೆ- ಮೋದಿ ಸರಕಾರದ ಈ ಕ್ರಮಕ್ಕೆ ಮುಸ್ಲಿಂ ಮಹಿಳೆಯರಿಂದ ಸ್ವಾಗತ
ಹೊಸದಿಲ್ಲಿ: ಮುಸ್ಲಿಂ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ, ಬೇಕಾಬಿಟ್ಟಿ ನೀಡುವ ವಿಚ್ಛೇದನ ತ್ರಿವಳಿ ತಲಾಖ್ ವಿರೋಧಿಸುವ ‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ –2017’ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.
ಮಸೂದೆಯಲ್ಲಿನ ಕೆಲವು ಅಂಶಗಳ ವಿರುದ್ಧ ಕೆಲವು ಮೂಲಭೂತ ವಾದಿಗಳು ಹಾಗೂ ಪ್ರತಿಪಕ್ಷಗಳ ವಿರೋಧದ ನಡುವೆಯೂ ಮಸೂದೆ ಮಂಡನೆಯಾಗಿದೆ.
'ಸಂವಿಧಾನ ಹಾಗೂ ಖುರಾನ್‌ಗೆ ವಿರೋಧವಾಗಿದ್ದರೆ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಒಪ್ಪಿಕೊಳ್ಳುವುದಿಲ್ಲ,' ಎಂದು ಮುಸ್ಲಿಂ ಮಹಿಳಾ ವೈಯಕ್ತಿಕ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಎಲ್ಲ ವಿರೋಧಗಳ ನಡುವೆಯೂ ಐತಿಹಾಸಿಕ ಮಸೂದೆ ಮಂಡನೆಯಾಗಿದೆ.
ಸುದೀರ್ಘ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್‌ನಲ್ಲಿ ತ್ರಿವಳಿ ತಲಾಖ್ ಪದ್ಧತಿ ಕಾನೂನು ಬಾಹಿರ, ಅಸಂವಿಧಾನಿಕವೆಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮೋದಿ ಸರಕಾರ ಮಸೂದೆ ಮಂಡಿಸಿದೆ.
ಸರಕಾರದ ಈ ಕ್ರಮಕ್ಕೆ ಸ್ವಾಗತ
ಮೋದಿ ನೇತೃತ್ವದ ಸರಕಾರ ಮನಸು ಮಾಡಿ, ಮುಸ್ಲಿಂ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಂಡನೆಯಾದ ಈ ಮಸೂದೆಗೆ ತ್ರಿವಳಿ ತಲಾಖ್ ಸಂತ್ರಸ್ತರು ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಇಂಥದ್ದೊಂದು ಐತಿಹಾಸಿಕ ಮಸೂದೆ ಮಂಡಿಸಿಲು ಕಾರಣವಾದ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
