2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸುವ ಸಾಮರ್ಥ್ಯ ಯಾರಿಗೂ ಇಲ್ಲವೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ನವದೆಹಲಿ (ಜು.31): 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸೆಯುವ ಸಾಮರ್ಥ್ಯ ಯಾರಿಗೂ ಇಲ್ಲವೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಅಚ್ಚರಿ ವಿಚಾರ ಅಂದರೆ 2014 ರಲ್ಲಿ ಎನ್’ಡಿಎ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿದಾಗ ನಿತೀಶ್ ಕುಮಾರ್ ಬಿಜೆಪಿಯನ್ನು ತೊರೆದು ಹೊರಬಂದಿದ್ದರು. ಕೋಮುಶಕ್ತಿಗಳನ್ನು ಉತ್ತೇಜಿಸಲು ಇಷ್ಟವಿಲ್ಲ. ಹಾಗಾಗಿ ಬಿಜೆಪಿಯಿಂದ ಹೊರ ಬಂದಿದ್ದೇನೆ ಅಂದರು. ಅದಾದ ನಂತರ ಆರ್’ಜೆಡಿ ಹಾಗೂ ಕಾಂಗ್ರೆಸ್ ಜೊತೆ ಸೇರಿ ಮಹಾ ಘಟಬಂಧನ ಮಾಡಿಕೊಂಡಿದ್ದರು. ಅಲ್ಲಿ ಆರ್’ಜೆಡಿ, ಕಾಂಗ್ರೆಸ್ ಜೊತೆ ಸಂಬಂಧ ಹಳಸಿದಾಗ ಅದನ್ನು ಬಿಟ್ಟು ಹೊರಬಂದು ಬಿಜೆಪಿ ಸಖ್ಯದೊಂದಿಗೆ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನಾನು ಮಹಾಘಟಬಂಧನವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಆರ್’ಜೆಡಿ ನಾಯಕರ ಭ್ರಷ್ಟಾಚಾರ ಜಾಸ್ತಿಯಾದಾಗ ಅವರ ಜೊತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಅದರಿಂದ ಹೊರಬರಬೇಕಾಯಿತು ಎಂದು ಆರ್’ಜೆಡಿ ಮುಖಂಡರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
