ಛತ್ರಪತಿ ಶಿವಾಜಿ ಮಹಾರಾಜ್ ಎಂಬ ಸಂಸ್ಕೃತಿ ರಕ್ಷಕ ಸಂಘಟನೆಗೆ ಸೇರಿದ್ದಾರೆನ್ನಲಾದ  ಕಾರ್ಯಕರ್ತರು, ಲೋನವಾಲ ಬಳಿಯ ವಿಸಾಪುರ್ ಕೋಟೆಯಲ್ಲಿ ಹೊಸ ವರ್ಷವನ್ನಾಚರಿಸಲು ಬಂದಿದ್ದ ದಂಪತಿಗಳನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆಂದು ಮಿಡ್-ಡೇ ವರದಿ ಮಾಡಿದೆ.

ಪುಣೆ (ಜ.04): ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದ ಯುವತಿಯರ ಮೆಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದ ಪುಣೆಯಲ್ಲೂ ಹೊಸವರ್ಷದ ರಾತ್ರಿ ಅಮಾನವೀಯ ಘಟನೆ ನಡೆದಿರುವುದು ವರದಿಯಾಗಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಎಂಬ ಸಂಸ್ಕೃತಿ ರಕ್ಷಕ ಸಂಘಟನೆಗೆ ಸೇರಿದ್ದಾರೆನ್ನಲಾದ ಕಾರ್ಯಕರ್ತರು, ಲೋನವಾಲ ಬಳಿಯ ವಿಸಾಪುರ್ ಕೋಟೆಯಲ್ಲಿ ಹೊಸ ವರ್ಷವನ್ನಾಚರಿಸಲು ಬಂದಿದ್ದ ದಂಪತಿಗಳನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆಂದು ಮಿಡ್-ಡೇ ವರದಿ ಮಾಡಿದೆ.

ವೃತ್ತಿಯಲ್ಲಿ ಫಿಟ್’ನೆಸ್ ಟ್ರೈನರ್ ಆಗಿರುವ ಪುಣೆಯ ಮಹಿಳೆ, ತನ್ನ ಪತಿ, ಮಿತ್ರರು ಹಾಗೂ ಅವರ ಪತ್ನಿ-ಮಕ್ಕಳು ಡಿ.31 ಮಧ್ಯಾಹ್ನ ಹೊಸ ವರ್ಷಾವನ್ನಾಚರಿಸುವ ಸಲುವಾಗಿ ಲೋನಾವಾಲ ಕೋಟೆಗೆ ಭೇಟಿ ನೀಡಿದ್ದರು.

ಸಂಜೆ ಹೊತ್ತಿಗೆ ಕ್ರಿಕೆಟ್ ಆಡಿದ ಬಳಿಕ ಕ್ಯಾಂಪ್-ಫೈರ್ ಹಾಕಿ ಮೋಜು ಮಾಡುತ್ತಿದ್ದಾಗ ಸಲ್ವಾರ್ ಕಮೀಝ್ ಧರಿಸಿದ ಹಾಗೂ ಕೈಯಲ್ಲಿ ದೊಣ್ಣೆ ಹಿಡಿದ 6 ಯುವತಿಯರು ಬಂದು ತಮಗೆ ಬೈಯಲಾರಂಭಿಸಿದ್ದಾರೆ. ಬಳಿಕ 9 ಮಂದಿ ಯುವಕರು ಅವರೊಂದಿಗೆ ಸೇರಿಕೊಂಡಿದ್ದಾರೆ. ನಾವು ಶರಾಬು, ಅಮಲು ಪದಾರ್ಥ ಸೇವಿಸಿದ್ದೇವೆಂದು ಆರೋಪಿಸಿ ಪುರುಷರಿಗೆ ಬಟ್ಟೆ ಕಳಚುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆ ಮಹಿಳೆ ಹೇಳಿದ್ದಾರೆ.

ನಾವು ಮದುವೆಯಾಗಿರುವ ದಂಪತಿಗಳೆಂದು ಹೇಳಿದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ಮಂಗಳಸೂತ್ರ ತೋರಿಸದಾಗ, ಬಿಂದಿ ಇಟ್ಟಿಲ್ಲವೆಂದು ನಮಗೆ ಕೆಟ್ಟದ್ದಾಗಿ ಬೈದು ಥಳಿಸಿದ್ದಾರಲ್ಲದೇ ಸಣ್ಣ ಮಕ್ಕಳನ್ನೂ ಕೂಡಾ ಥಳಿಸಿದ್ದಾರೆಂದು ಆ ಮಹಿಳೆ ದೂರಿದ್ದಾರೆ.

ಕೈಯಲ್ಲಿ ಕೇಸರಿ ಧ್ವಜ ನೀಡಿ ಶಿವಾಜಿ ಮಹಾರಜರಿಗೆ ಜೈಕಾರ ಹಾಕಿಸಿದರಲ್ಲದೇ, ಮೈಮೇಲೆ ತಂಪು ಪಾನೀಯಗಳನ್ನು ಸುರಿದಿದ್ದಾರೆಂದು ದೂರು ನಿಡಿರುವ ಮಹಿಳೆ ಹೇಳಿದ್ದಾರೆ.

ಆ ಬಳಿಕ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೂ ಅವರು ಕ್ರಮ ಕೈಗೊಳ್ಳಲು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ, ಲೋನವಾಲ ಪೊಲೀಸ್ ವರಿಷ್ಠಾಧಿಕಾರಿಗೆ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

(ಸಾಂದರ್ಭಿಕ ಚಿತ್ರ; ಕೃಪೆ ವಿಕಿಮಾಪಿಯಾ)