ಶಬರಿಮಲೆ ದೇಗುಲಕ್ಕೆ ಆಗಮಿಸಿದ್ದ ನಾಲ್ವರು ತೃತೀಯ ಲಿಂಗಿಗಳಿಗೆ ಮಹಿಳೆಯರ ಉಡುಪು ಧರಿಸಿದ ಕಾರಣಕ್ಕೆ ಪೊಲೀಸರು ಪ್ರವೇಶಕ್ಕೆ ನಿರಾಕರಿಸಿದ್ದಾರೆ.
ಕೊಟ್ಟಾಯಮ್ : ಕೇರಳ ಪೊಲೀಸರು ಭಾನುವಾರ ಶಬರಿಮಲೆ ದೇಗುಲಕ್ಕೆ ಆಗಮಿಸಿದ್ದ ನಾಲ್ವರು ತೃತೀಯ ಲಿಂಗಿಗಳಿಗೆ ಪ್ರವೇಶಕ್ಕೆ ನಿರಾಕರಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಬಳಿ ಅತ್ಯಂತ ಅಮಾನವೀಯವಾಗಿ ಪೊಲೀಸರು ನಡೆಸಿಕೊಂಡಿದ್ದಾರೆ ಎಂದು ತೃತೀಯ ಲಿಂಗಿಗಳಲ್ಲಿ ಒಬ್ಬರಾದ ಅನನ್ಯ ಎನ್ನುವವರು ಹೇಳಿದ್ದಾರೆ.
ಶನಿವಾರ ಶಬರಿಮಲೆ ದೇಗುಲಕ್ಕೆ ಯಾತ್ರೆ ಆರಂಭಿಸಿದ್ದು, ವಿಶೇಷ ಪೊಲೀಸ್ ಪಡೆ ನಮ್ಮ ಯಾತ್ರೆಗೆ ಸಾಕ್ಷಿಯಾಗಿತ್ತು. ಆದರೆ ನಾವು ಎರುಮಲೈಗೆ ಬಂದಾಗ ಇಲ್ಲಿರುವ ಪೊಲೀಸ್ ಅಧಿಕಾರಿಗಳು ತಮ್ಮ ಬಳಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ತೃತೀಯ ಲಿಂಗಿ ಅನನ್ಯ ಹೇಳಿದ್ದಾರೆ.
ನೀವು ಮಹಿಳಾ ಉಡುಪಿನಲ್ಲಿ ಇರುವುದರಿಂದ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಅಲ್ಲದೇ ಬಟ್ಟೆ ಬದಲಾಯಿಸಿ ಬಂದಲ್ಲಿ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಹೇಳಿದರು. ಆದರೆ ನಾವು ಬಟ್ಟೆ ಬದಲಾಯಿಸಿ ಬರುವುದಾಗಿ ಹೇಳಿದ ಬಳಿಕ ಪೊಲೀಸರು ತಮ್ಮ ಮನಸನ್ನು ಬದಲಾಯಿಸಿಕೊಂಡು ಮತ್ತೆ ಅವಕಾಶ ನೀಡುವುದಿಲ್ಲ ಎಂದರು.
ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಅನೇಕ ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದು, ಈ ವೇಳೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
