ಬೆಂಗಳೂರು (ಜೂ. 21): ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದ್ದು, ವರ್ಗಾವಣೆ ಮಿತಿಯನ್ನು ಶೇ.2ರಿಂದ ಶೇ.6 ಕ್ಕೆ ಏರಿಕೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಪ್ರಸಕ್ತ 2019-20ನೇ ಸಾಲಿಗೆ ನಿಗದಿಪಡಿಸಿರುವ ವರ್ಗಾವಣೆ ಮಿತಿಯನ್ನು ಒಟ್ಟಾರೆ ಕಾರ್ಯನಿರತ ವೃಂದಬಲದ ಶೇ.2ರ ಬದಲಾಗಿ ಶೇ.6ಕ್ಕೆ ನಿಗದಿಪಡಿಸಲಾಗಿದೆ. ವರ್ಗಾವಣೆಯನ್ನು ಅನುಷ್ಠಾನಗೊಳಿಸುವಾಗ ಖಾಲಿ ಹುದ್ದೆಗಳು ವಿವಿಧ ಜಿಲ್ಲೆಗಳಲ್ಲಿ ಸಮನಾಗಿ ಹಂಚಿಕೆಯಾಗಿರುವಂತೆಯೂ ನೋಡಿಕೊಳ್ಳುವಂತೆ ಎಲ್ಲಾ ಸಕ್ಷಮ ಪ್ರಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಯಾವುದೇ ಒಂದು ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಯಾವುದೇ ವೃಂದದಲ್ಲಿರುವ ಖಾಲಿ ಹುದ್ದೆಗಳ ಸಂಖ್ಯೆಯು ಅನುಪಾತರಹಿತವಾಗಿ ಹೆಚ್ಚಾಗಿದ್ದಲ್ಲಿ ಸಕ್ಷಮ ಪ್ರಾಧಿಕಾರಿಗಳು ಸಾಧ್ಯವಾದಷ್ಟುಮಟ್ಟಿಗೆ ಖಾಲಿ ಹುದ್ದೆಗಳು ವಿವಿಧ ಜಿಲ್ಲೆಗಳಲ್ಲಿ ಸಮನಾಗಿ ಹಂಚಿಕೆಯಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಹೈದರಾಬಾದ್‌-ಕರ್ನಾಟಕ ಪ್ರದೇಶದಲ್ಲಿ ನೆಲೆಸಿರುವ ಕಚೇರಿಗಳಿಗೆ ಸ್ಥಳೀಯ ವೃಂದ ಮತ್ತು ಉಳಿದ ವೃಂದಗಳಲ್ಲಿನ ವಿವಿಧ ವೃಂದದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆದುರಾಗಿ ನೇಮಕಾತಿ ಹೊಂದಿರುವ ನೌಕರರನ್ನು ಅವರ ನೇಮಕಾತಿ ದಿನಾಂಕದಿಂದ ಕನಿಷ್ಠ 10 ವರ್ಷಗಳವರೆಗೆ ಹೈದರಾಬಾದ್‌-ಕರ್ನಾಟಕ ಪ್ರದೇಶ ಹೊರತುಪಡಿಸಿ ಬೇರೆಡೆಗೆ ವರ್ಗಾವಣೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.