ತ್ರಾಲ್ ಎನ್'ಕೌಂಟರ್'ನಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಒಬ್ಬಾತ ಪಾಕ್ ರಾಷ್ಟ್ರೀಯನಾಗಿದ್ದಾನೆ. ಆತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ನಾಯಕನೆನ್ನಲಾಗಿದೆ.

ಶ್ರೀನಗರ(ಮಾ. 05): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್'ನಲ್ಲಿ ಭದ್ರತಾ ಪಡೆಗಳು ಹಾಗು ಉಗ್ರರ ನಡುವೆ 15 ಗಂಟೆಗಳಿಂದ ನಡೆಯುತ್ತಿದ್ದ ಗುಂಡಿನ ಕಾಳಗ ಅಂತ್ಯಗೊಂಡಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ದಾಳಿ ನಡೆಸಿದ ಉಗ್ರರ ಗುಂಪಿನ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಭೀಕರ ಗುಂಡಿನ ಕಾಳಗದಲ್ಲಿ ಒಬ್ಬ ಪೊಲೀಸ್ ಬಲಿಯಾಗಿದ್ದಾರೆ. ತಪ್ಪಿಸಿಕೊಂಡ ಉಗ್ರರನ್ನು ಹಿಡಿಯಲು ಭದ್ರತಾಪಡೆಗಳು ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ತ್ರಾಲ್ ಎನ್'ಕೌಂಟರ್'ನಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಒಬ್ಬಾತ ಪಾಕ್ ರಾಷ್ಟ್ರೀಯನಾಗಿದ್ದಾನೆ. ಆತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ನಾಯಕನೆನ್ನಲಾಗಿದೆ.

ಕಳೆದ ವರ್ಷ ಭದ್ರತಾ ಪಡೆಗಳ ಎನ್'ಕೌಂಟರ್'ನಲ್ಲಿ ಹತ್ಯೆಯಾದ ಹಿಜ್ಬುಲ್ ನಾಯಕ ಬುರ್ಹನ್ ವಾನಿಯ ಸಹವರ್ತಿಗಳೆನ್ನಲಾದ ಇಬ್ಬರು-ಮೂವರು ಉಗ್ರರು ತ್ರಾಲ್'ನ ಹಾಫೂ ನಾಜ್'ನೀಪೋರಾ ಎಂಬಲ್ಲಿದ್ದಾರೆಂಬ ಸುಳಿವು ಪಡೆದ ಭದ್ರತಾ ಪಡೆಗಳು ಕಳೆದ ರಾತ್ರಿಯಂದು ಕಾರ್ಯಾಚರಣೆ ಆರಂಭಿಸಿವೆ. ಜಮ್ಮು-ಕಾಶ್ಮೀರ ಪೊಲೀಸ್ ಪಡೆ ಕೂಡ ಸೇನೆಗೆ ಸಾಥ್ ನೀಡಿದೆ. 15ಗಂಟೆಗಳ ನಿರಂತರ ಗುಂಡಿನ ಚಕಮಕಿ ನಡೆದು ಇಬ್ಬರು ಉಗ್ರರು ಹತರಾಗಿದ್ದಾರೆ. ಇನ್ನೊಬ್ಬ ಉಗ್ರ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ.