42 ಗಂಟೆಯಲ್ಲಿ ಬರಬೇಕಿದ್ದ ರೈಲೊಂದು ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ತಲುಪಬೇಕಾದ ಸ್ಥಳವನ್ನು ತಲುಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬೆಂಗಳೂರು : ರಸಗೊಬ್ಬರ ತುಂಬಿದ್ದ ಗೂಡ್ಸ್ ರೈಲು ಬೋಗಿಯು (ವ್ಯಾಗನ್) ನಿಗದಿತ ಸ್ಥಳಕ್ಕೆ ತಲುಪಲು ಬರೋಬ್ಬರಿ ನಾಲ್ಕು ವರ್ಷಗಳನ್ನು ತೆಗೆದುಕೊಂಡಿದೆ! 2014 ರಂದು ಹೊರಟ ರೈಲು 2018 ಕ್ಕೆ ತಲುಪಿದೆ. ಅಚ್ಚರಿಯೆನ್ನಿಸಿದರೂ ಇದು ನಿಜವಾದ ಘಟನೆಯಾಗಿದ್ದು, ರೈಲ್ವೆ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ.
ಆಗಿದ್ದೇನೆಂದರೆ, 2014 ನ.10 ರಂದು ಡಿ- ಅಮೋನಿಯಂ ಫಾಸ್ಫೇಟ್‌ನ 1,316 ಚೀಲಗಳನ್ನು ಸಾಗಿಸಲು ಗೂಡ್ಸ್ ರೈಲೊಂದರ ವ್ಯಾಗನ್ ಅನ್ನು ರಸಗೊಬ್ಬರ ಕಂಪನಿಯೊಂದು ಕಾಯ್ದಿರಿಸಿತ್ತು. ಇದು ವಿಶಾಖಪಟ್ಟಣದಿಂದ ಉತ್ತರಪ್ರದೇಶದ ಬಸ್ತಿ ನಗರಕ್ಕೆ ಬರಬೇಕಿತ್ತು. ಗೂಡ್ಸ್ ರೈಲೊಂದರಲ್ಲಿ ಈ ವ್ಯಾಗನ್ ನಿಗದಿತ ಸ್ಥಳ ತಲುಪಲು 42 ತಾಸು 13 ನಿಮಿಷದ ಸಮಯವನ್ನೂ ರೈಲ್ವೆ ಇಲಾಖೆ ನಿಗದಿ ಮಾಡಿತ್ತು.
ಆದರೆ, 2014 ರ ನವೆಂಬರ್ 10 ರಿಂದ ವಿಶಾಖಪಟ್ಟಣಂನಿಂದ ಹೊರಟ ರೈಲು ನಾಲ್ಕು ವರ್ಷಗಳಲ್ಲಿ 1,326 ಕಿ.ಮೀ ಪ್ರಯಾಣಿಸಿ ಬುಧವಾರ 3.30ಕ್ಕೆ ಉತ್ತರ ಪ್ರದೇಶದ ಬಸ್ತಿ ನಿಲ್ದಾಣಕ್ಕೆ ಬಂದು ತಲುಪಿದೆ. ಕಾಣೆಯಾಗಿದ್ದ ರೈಲು ಪುನಃ ಬಂದಿದ್ದನ್ನು ಕಂಡು ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಹಾಗಿದ್ದರೆ ಈ ೪ ವರ್ಷ ಅದ್ಹೇಗೆ ಈ ವ್ಯಾಗನ್ ಕಾಣೆಯಾಗಿತ್ತು ಎಂದು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಹೀಗೆ ಹೇಳಿದರು. ‘ಕೆಲವೊಮ್ಮೆ ವ್ಯಾಗನ್‌ಗಳು ಕೆಟ್ಟು ಹೋದಾಗ ಅವುಗಳನ್ನು ಗೂಡ್ಸ್ ರೈಲಿನ ಇತರ ವ್ಯಾಗನ್‌ಗಳಿಂದ ಬೇರ್ಪಡಿಸಿ ರಿಪೇರಿಗಾಗಿ ಯಾರ್ಡ್‌ಗೆ ಕಳಿಸಲಾಗುತ್ತದೆ. ಈ ವ್ಯಾಗನ್ ಕೂಡ ಕೆಟ್ಟಿದ್ದರಿಂದ ಮಾರ್ಗಮಧ್ಯದಲ್ಲಿ ಅದನ್ನು ಯಾಡ್ ಗೆರ್ ಕಳಿಸಿರಬಹುದು. ಆಗ ಸಮನ್ವಯದ ಕೊರತೆಯಿಂದ ಯಾರ್ಡ್‌ನಲ್ಲೇ ಅದು ಬಾಕಿಯಾಗಿರಬಹುದು. ಅದು ಈಗ ಲಭಿಸಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಬಸ್ತಿಯ ಉದ್ಯಮಿ ರಾಮಚಂದ್ರ ಗುಪ್ತಾ ಎನ್ನುವವರು ಇಂಡಿಯನ್ ಪೊಟಾಶ್ ಲಿಮಿಟೆಡ್ ಕಂಪನಿಯ ವತಿಯಿಂದ ರೈಲನ್ನು ಬುಕ್ ಮಾಡಿದ್ದರು.
ವ್ಯಾಗನ್ ನಾಪತ್ತೆ ಬಳಿಕ ರೈಲ್ವೆ ಇಲಾಖೆಯಲ್ಲಿ ದೂರು ಕೂಡ ದಾಖಲಾಗಿತ್ತು. ವ್ಯಾಗನ್ ಆಗಮನದ ವಿಳಂಬದಿಂದ ರಸಗೊಬ್ಬರ ಖರೀದಿಸಿದ್ದ ಕಂಪನಿಗೆ 14 ಲಕ್ಷ ರು. ನಷ್ಟ ಉಂಟಾಗಿದೆಯಂತೆ. ಈ ಬಗ್ಗೆ ರೈಲ್ವೆ ಇಲಾಖೆ ಹಾಗೂ ರಸಗೊಬ್ಬರ ಕಂಪನಿಯ ಮಧ್ಯೆ ಮಾತುಕತೆ ನಡೆದಿದ್ದು, ರೈಲ್ವೆ ಇಲಾಖೆ ನಷ್ಟ ಭರಿಸಿಕೊಡುವ ಸಾಧ್ಯತೆ ಇದೆ.
