ನವದೆಹಲಿ[ಫೆ.13]: ಗ್ರಾಹಕರು ತಮ್ಮ ಇಷ್ಟದ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಮಾತ್ರವೇ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಯ ಗಡುವನ್ನು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಮಾ.31ಕ್ಕೆ ವಿಸ್ತರಿಸಿದೆ. ಇದರಿಂದ ಇದುವರೆಗೂ ತಮ್ಮ ಇಷ್ಟದ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳದ ಗ್ರಾಹಕರು ಇನ್ನೂ ಕೆಲವು ದಿನಗಳ ಕಾಲ ನಿರಾಳವಾಗಿರುವಂತಾಗಿದೆ.

ಟ್ರಾಯ್‌ ಕಚೇರಿಯಲ್ಲಿ ನಡೆದ ಡಿಟಿಎಚ್‌ ಹಾಗೂ ಬಹು ವ್ಯವಸ್ಥೆ ನಿರ್ವಾಹಣಾಕಾರರ ನಡುವಿನ ಸಭೆಯಲ್ಲಿ ಗ್ರಾಹಕರು ತಮ್ಮ ಇಷ್ಟದ ಚಾನೆಲ್‌ಗಳ ಆಯ್ಕೆ ಮಾಡಿಕೊಳ್ಳುವ ಗಡುವನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೇಬಲ್‌ ಆಪರೇಟರ್‌ಗಳು ಮತ್ತು ಡಿಟಿಎಚ್‌ ಕಂಪನಿಗಳು ಗ್ರಾಹಕರಿಗೆ ಸರಿಹೊಂದುವ ಒಳ್ಳೆಯ ಪ್ಲಾನ್‌ ಅನ್ನು ನೀಡುವಂತೆ ಟ್ರಾಯ್‌ ಹೇಳಿದೆ. ಅಲ್ಲದೆ, ಇದುವರೆಗೂ ಹೊಸ ಪ್ಲಾನ್‌ ಆಯ್ಕೆ ಮಾಡಿಕೊಳ್ಳದ ಗ್ರಾಹಕರಿಗೆ ಹಳೇ ಪ್ಲಾನ್‌ನಲ್ಲಿ ಇರುವ ಚಾನೆಲ್‌ಗಳು ಮುಂದುವರಿಯಲಿವೆ ಎಂದಿದೆ ಟ್ರಾಯ್‌.

ಗ್ರಾಹಕರು ತಮ್ಮ ಇಷ್ಟದ ಚಾನೆಲ್‌ಗಳಿಗೆ ಮಾತ್ರವೇ ಹಣ ಪಾವತಿಸುವ ನೂತನ ವ್ಯವಸ್ಥೆ ಜಾರಿ ಗಡುವನ್ನು ಫೆ.1ಕ್ಕೆ ನಿರ್ಧರಿಸಲಾಗಿತು.

ದೇಶದಲ್ಲಿ ಒಟ್ಟು 17 ಕೋಟಿ ಮನೆಗಳಲ್ಲಿ ಟೀವಿಯಿದೆ. ಅವುಗಳಲ್ಲಿ 7 ಕೋಟಿ ಡಿಟಿಎಚ್‌ ಸಂಪರ್ಕ ಹಾಗೂ 10 ಕೋಟಿ ಕೇಬಲ್‌ ಟೀವಿ ಸಂಪರ್ಕಗಳಿವೆ. ಅವುಗಳಲ್ಲಿ 6.5 ಕೋಟಿ ಕೇಬಲ್‌ ಸಂಪರ್ಕ ಹೊಂದಿರುವ ಕುಟುಂಬಗಳು ಹಾಗೂ 2.5 ಕೋಟಿ ಡಿಟಿಎಚ್‌ ಸಂಪರ್ಕ ಹೊಂದಿರುವ ಕುಟುಂಬಗಳು ಇಲ್ಲಿಯವರೆಗೆ ಹೊಸ ವ್ಯವಸ್ಥೆಯಡಿ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಂಡಿವೆ.