ಅಹಮದಾಬಾದ್[ಏ.30]: ಸಂಚಾರಿ ನಿಯಮ ಉಲ್ಲಂಘಿಸುವುದು ತಪ್ಪು ಹಾಗೂ ಇದಕ್ಕೆ ದಂಡ ಭರಿಸಬೇಕಾಗುತ್ತದೆ. ಆದರೆ ಗುಜರಾತ್ ನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕನಿಗೆ ಆತನ ಪ್ರೀತಿ ಪರ್ಮನೆಂಟ್ ಆಗಿ ಸಿಕ್ಕಿದೆ. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ವಿವರ

ವತ್ಸಲ್ ಪಾರೆಖ್ ಹೆಸರಿನ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಕರೆದೊಯ್ಯುತ್ತಿದ್ದ. ಈ ವೇಳೆ ಟ್ರಾಫಿಲ್ ಸಿಗ್ನಲ್ ನಿಯಮ ಬ್ರೇಕ್ ಮಾಡಿ ಬೈಕ್ ಚಲಾಯಿಸಿದ್ದ. ಇದನ್ನು ಗಮನಿಸಿದ್ದ ಟ್ರಾಫಿಕ್ ಪೊಲೀಸ್ ಬೈಕ್ ನಂಬರ್ ಗಮನಿಸಿ ಆತನ ಮನೆಗೆ ದಂಡ ವಿಧಿಸಿ ಚಲನ್ ಕಳುಹಿಸಿದ್ದರು.

ಆದರೆ ಪೊಲೀಸರು ಕಳುಹಿಸಿದ್ದ ಈ ರಸೀದಿ ಯುವಕನ ಮನೆಯವರ ಕೈ ಸೇರಿತ್ತು. ಪೊಲೀಸರು ಈ ರಶೀದಿಯೊಂದಿಗೆ ಯುವಕ ಟ್ರಾಫಿಕ್ ನಿಯಮ  ಉಲ್ಲಂಘಿಸಿದ್ದ ಫೋಟೋವನ್ನು ಕಳುಹಿಸಿದ್ದರು. ಫೋಟೋದಲ್ಲಿ ತಮ್ಮ ಮನೆ ಮಗನೊಂದಿಗೆ ಯುವತಿಯೊಬ್ಬಳು ಬೈಕ್ ನಲ್ಲಿರುವುದನ್ನು ಗಮನಿಸಿದ ಮನೆಯವರು ವತ್ಸಲ್ ಮನೆಗೆ ಬರುತ್ತಿದ್ದಂತೆಯೇ ಆಕೆಯ ಕುರಿತಾಗಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಆಕೆಯನ್ನು ತಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಬೇಕೆಂಬ ಆಸೆ ಇದೆ ಎಂಬ ವಿಚಾರ ವತ್ಸಲ್ ಬಾಯ್ಬಿಟ್ಟಿದ್ದಾನೆ. ಇದನ್ನು ಕೆಳಿದ ಮನೆ ಮಂದಿ ಯುವತಿಯ ತಂದೆ ತಾಯಿಯನ್ನು ಭೇಟಿಯಾಗಿ ಮಕ್ಕಳು ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ತಿಳಿಸಿದ್ದಾರೆ ಹಾಗೂ ಮದುವೆ ಮಾತುಕತೆ ನಡೆಸಿದ್ದಾರೆ.

ಇದನ್ನು ತಿಳಿದ ಯುವಕನಿಗೆ ಬಹಳಷ್ಟು ಖುಷಿಯಾಗಿದೆ. ಇದೇ ಖುಷಿಯಲ್ಲಿ ಅಹಮದಾಬಾದ್ ಪೊಲೀಸರಿಗೆ ದಂಡ ವಿಧಿಸಿ ಮನೆಗೆ ರಶೀದಿ ಜೊತೆಗೆ ಫೋಟೋ ಕಳುಹಿಸಿದ್ದಕ್ಕಾಗಿ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾನೆ.