ಬಂಡೀಪುರ[ಸೆ.29]: ಬಂಡೀಪುರದಲ್ಲಿ ರಾತ್ರಿ ವೇಳೆ ರಸ್ತೆ ಸಂಚಾರಕ್ಕೆ ನಿಷೇಧ ತೆರವುಗೊಳಿಸುವಂತೆ ಕೋರಿ ಯುವಕರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ. ಬಂಡೀಪುರ ಮೀಸಲು ಅರಣ್ಯ ಪ್ರದೇಶದ ಮೂಲಕ  ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೇರಲಾದ ನಿಷೇಧದಿಂದ ಕೇರಳ ಹಾಗು ಕರ್ನಾಟಕದ ಲಕ್ಷಾಂತರ ಮಂದಿಗೆ ತೊಂದರೆಯಾಗುತ್ತಿದೆ ಹೀಗಾಗಿ ಈ ನಿಷೇಧವನ್ನು ಹಿಂಪಡೆಯಬೆಕು ಎಂದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಹಾಗೂ ಕೇರಳದ ವಯನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ 'ರಾಷ್ಟ್ರೀಯ ಹೆದ್ದಾರಿ-766ರಲ್ಲಿ ನಿತ್ಯವೂ 9 ಗಂಟೆ ಸಂಚಾರ ನಿಷೇಧ ವಿರೋಧಿಸಿ ಉಪವಾಸ ನಡೆಸುತ್ತಿರುವ ಯುವಕರಿಗೆ ನನ್ನ ಬೆಂಬಲವಿದೆ. ಈ ನಿರ್ಬಂಧ ಕೇರಳ ಹಾಗೂ ಕರ್ನಾಟಕದ ಲಕ್ಷಾಂತರ ಜನರಿಗೆ ತೊಂದರೆಯಗುತ್ತಿದೆ' ಎಂದಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ನಮ್ಮ ಪರಿಸರ ರಕ್ಷಿಸುವ ಸಾಮೂಹಿಕ ಜವಾಬ್ದಾರಿಯನ್ನು ಎತ್ತಿಹಿಡಿಯುವುದರೊಂದಿಗೆ ಸ್ಥಳೀಯ ಜನಸಮುದಾಯಗಳ ಹಿತಾಸಕ್ತಿ ಕಾಪಾಡುವಂತೆ ನಾನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇನೆ' ಎಂದಿದ್ದಾರೆ.

ಹುಲಿ ಮೀಸಲು ಅರಣ್ಯ ಬಂಡೀಪುರದ ಮೂಲಕ ಹಾದು ಹೋಗುವ ಹೆದ್ದಾರಿ ಸಂಚಾರವನ್ನು ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ನಿಷೇಧಿಸಲಾಗಿದೆ. ಇನ್ನು ಆಗಸ್ಟ್ ನಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಯನಾಡ್ ಹಾಗೂ ಕರ್ನಾಟಕದ ಮೈಸೂರನ್ನು ಸಂಪರ್ಕಿಸುವ ಬಂಡೀಪುರ ಮೀಸಲು ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಬೇಕೆಂದು ಕೇಳಿದ್ದರು.