ಇನ್'ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವಿಸಸ್ (IL&FS) ಎಂಬ ಸಂಸ್ಥೆಯು ಕೇವಲ ಐದೂವರೆ ವರ್ಷದಲ್ಲಿ ಸುರಂಗ ನಿರ್ಮಿಸಿದೆ.
ನವದೆಹಲಿ(ಏ. 02): ಪ್ರಧಾನಿ ಮೋದಿ ಭಾನುವಾರ ಉದ್ಘಾಟನೆ ಮಾಡಿರುವ ಚೆನಾನಿ-ನಾಶರಿ ಸುರಂಗ ಅನೇಕ ಕಾರಣಗಳಿಂದ ಗಮನ ಸೆಳೆದಿದೆ. ಇದು ಭಾರತದ ಅತಿ ಉದ್ದದ ಸುರಂಗ ಮಾರ್ಗವೆಂಬ ಹೆಗ್ಗಳಿಕೆ ಹೊಂದಿದೆ. ಜೊತೆಗೆ ಇದಕ್ಕೆ ಇನ್ನೂ ಹಲವು ವೈಶಿಷ್ಟ್ಯಗಳಿವೆ.
ಚೆನಾನಿ-ನಾಶ್ರೀ ಸುರಂಗದ ವೈಶಿಷ್ಟ್ಯಗಳು:
* ಹಿಮಾಲಯ ಕಣಿವೆಯ ಅತ್ಯಂತ ದುರ್ಗಮ ಮಾರ್ಗದಲ್ಲಿ ಅತ್ಯಂತ ಚಾಕಚಕ್ಯತೆಯಿಂದ ನಿರ್ಮಾಣ
* ದ್ವಿಮುಖ ಪಥದವಿರುವ ಈ ಸುರಂಗದ ಉದ್ದ 9.2 ಕಿ.ಮೀ. ಇದು ಭಾರತದಲ್ಲೇ ಅತೀ ಉದ್ದದ ಸುರಂಗ ಮಾರ್ಗವೆನಿಸಿದೆ.
* ಈ ಸುರಂಗದಿಂದಾಗಿ ಚೆನಾನಿ ಮತ್ತು ನಾಶರಿ ನಡುವಿನ ರಸ್ತೆ ಮಾರ್ಗವು 10.9 ಕಿಮೀಗೆ ಇಳಿಯುತ್ತದೆ. ಸುರಂಗವಿಲ್ಲದಿದ್ದರೆ ಪ್ರಯಾಣಿಕರು ಇವೆರಡು ಸ್ಥಳಗಳ ನಡುವೆ ಪ್ರಯಾಣಿಸಲು 41 ಕಿಮೀ ಸಾಗಬೇಕಿತ್ತು.
* ಸುರಂಗವು ಸಮುದ್ರ ಮಟ್ಟದಿಂದ 1200 ಮೀಟರ್(4,000 ಅಡಿ) ಎತ್ತರದಲ್ಲಿದೆ.
* ವಿಶ್ವ ದರ್ಜೆಯ "ಇಂಟಿಗ್ರೇಟೆಡ್ ಟನೆಲ್ ಕಂಟ್ರೋಲ್ ಸಿಸ್ಟಂ" ಹೊಂದಿರುವ ಭಾರತದ ಮೊದಲ ಸುರಂಗ ಮಾರ್ಗ ಇದಾಗಿದೆ. ಸೌರ ಬೆಳಕಿನ ವ್ಯವಸ್ಥೆ, ಅಗ್ನಿ ಅವಘಡ ನಿಯಂತ್ರಣ, ಸಿಗ್ನಲ್, ಕಮ್ಯೂನಿಕೇಶನ್, ವಿದ್ಯುತ್ ಮೊದಲಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲಾಗಿದೆ.
* ಕಣಿವೆ ರಾಜ್ಯದ ಪ್ರಮುಖ ನಗರಗಳಾದ ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣ ಅವಧಿ ಎರಡೂವರೆ ಗಂಟೆಯಷ್ಟು ಕಡಿಮೆಯಾಗಲಿದೆ. ಇದರಿಂದ ಪ್ರತೀ ದಿನ ಸುಮಾರು 28 ಲಕ್ಷ ರೂಪಾಯಿ ಉಳಿತಾಯವಾಗಲಿದೆ ಎಂಬ ಲೆಕ್ಕಾಚಾರವೊಂದಿದೆ.
* ಜಮ್ಮು-ಶ್ರೀನಗರ ನಡುವಿನ 286 ಕಿಮೀ ಚತುಷ್ಪಥ ಹೆದ್ದಾರಿ ಯೋಜನೆಯ ಒಂದು ಭಾಗವಾಗಿರುವ ಈ ಸುರಂಗದ ನಿರ್ಮಾಣಕ್ಕೆ ತಗುಲಿರುವ ವೆಚ್ಚ 3,720 ಕೋಟಿ ರೂ.
* ಇನ್'ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವಿಸಸ್ (IL&FS) ಎಂಬ ಸಂಸ್ಥೆಯು ಕೇವಲ ಐದೂವರೆ ವರ್ಷದಲ್ಲಿ ಸುರಂಗ ನಿರ್ಮಿಸಿದೆ.
* ಹೆಚ್ಚೇನು ಮರ ಕಡಿಯದೇ ನಿರ್ಮಿಸಿರುವ ಸುರಂಗವು ವರ್ಷಾದ್ಯಂತ ಯಾವುದೇ ಹವಾಮಾನದಲ್ಲೂ ಬಳಕೆಯೋಗ್ಯವಾಗುಂತೆ ವ್ಯವಸ್ಥೆ ಹೊಂದಿದೆ.
* ಮುಖ್ಯ ಸುರಂಗದ ಪಕ್ಕದಲ್ಲೇ ಮತ್ತೊಂದು ಸುರಂಗ ನಿರ್ಮಿಸಲಾಗಿದೆ. ಪ್ರತೀ 300 ಮೀಟರ್'ಗೂ ಇವೆರಡು ಸುರಂಗಗಳಿಗೆ ಜೋಡಿಕೆಯಾಗಿ ಕ್ರಾಸ್ ಪ್ಯಾಸೇಜ್'ಗಳನ್ನು ನಿರ್ಮಿಸಲಾಗಿದೆ. ಅಪಾಯದ ಸಂದರ್ಭ ಎದುರಾದಾಗ ಮುಖ್ಯ ಸುರಂಗದಿಂದ ಪರ್ಯಾಯ ಸುರಂಗಕ್ಕೆ ಬದಲಾಯಿಸಿಕೊಳ್ಳಲು ಅವಕಾಶವಿದೆ.

