ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಭರ್ತಿ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸಂಜೆ ದೆಹಲಿಗೆ ತೆರಳಲಿದ್ದಾರೆ.

ಬೆಂಗಳೂರು (ಆ.15): ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಭರ್ತಿ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸಂಜೆ ದೆಹಲಿಗೆ ತೆರಳಲಿದ್ದಾರೆ.

ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ ಕ್ವಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಲು ಬುಧವಾರ ನಗರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಅವರೊಂದಿಗೆ ಸಂಜೆ ೪ರ ಸುಮಾರಿಗೆ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣಿಸಲಿದ್ದು, ಬಹುತೇಕ ಗುರುವಾರ ನಗರಕ್ಕೆ ಹಿಂತಿರುಗುವರು. ಈ ವೇಳೆಗೆ ಅವರು ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ತಮ್ಮ ಬಳಿಯಿರುವ ಗೃಹ ಖಾತೆಯನ್ನು ಯಾರಿಗೆ ನೀಡಬೇಕು ಮತ್ತು ವಿಧಾನಪರಿಷತ್ತಿಗೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗ್ಗೆ ಹೈಕಮಾಂಡ್‌ನಿಂದ ಸ್ಪಷ್ಟ ಸೂಚನೆ ಪಡೆದುಕೊಳ್ಳಲಿದ್ದಾರೆ ಎಂದು ಅವರು ಆಪ್ತ ಮೂಲಗಳು ಹೇಳಿವೆ.

ಕುತೂಹಲಕಾರಿ ಸಂಗತಿಯೆಂದರೆ, ಹೈಕಮಾಂಡ್‌ನೊಂದಿಗೆ ಚರ್ಚೆಗೆ ಸಿಎಂ ತೆರಳಲಿರುವ ಈ ಹಂತದಲ್ಲಿ ಸಚಿವ ಸಂಪುಟ ಸೇರ್ಪಡೆಗೆ ನಡೆಯುತ್ತಿರುವ ಲಾಬಿಯನ್ನು ಮೀರಿಸುವ ಪ್ರಬಲ ಲಾಬಿ ವಿಧಾನಪರಿಷತ್ತಿನ ಒಂದು ಸ್ಥಾನಕ್ಕಾಗಿ ನಡೆದಿದೆ.

ಬಿಜೆಪಿಯ ವಿಮಲಾಗೌಡ ಅವರ ನಿಧನದಿಂದ ತೆರವಾದ ಈ ಸ್ಥಾನದ ಅವಧಿ ಕೇವಲ 10 ತಿಂಗಳು ಮಾತ್ರ ಇದ್ದರೂ ಲಾಬಿ ಮಾತ್ರ ಪ್ರಬಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸ್ಥಾನಕ್ಕಾಗಿ ಮಾಜಿ ಮೇಯರ್ ರಾಮಚಂದ್ರಪ್ಪ ಹಾಗೂ ತಮ್ಮ ಹಳೆಯ ಮಿತ್ರ ಸಿ.ಎಂ. ಇಬ್ರಾಹಿಂ ಅವರಿಬ್ಬರ ಪೈಕಿ ಒಂದು ಹೆಸರು ಸೂಚಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ಯು.ಬಿ.ವೆಂಕಟೇಶ್ ಅವರ ಹೆಸರು ಸೂಚಿಸಲು ಸಜ್ಜಾಗಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ತಮ್ಮ ಆಪ್ತ ಜಿ.ಸಿ.ಚಂದ್ರಶೇಖರ್ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಈ ಸ್ಥಾನವನ್ನು ಮಹಿಳೆಗೆ ನೀಡಬೇಕು ಎಂದು ಹೈಕಮಾಂಡ್ ತೀರ್ಮಾನಿಸಿದರೆ ಆಗ ಯಾರು ಎಂಬ ಪ್ರಶ್ನೆಗೆ, ರಾಹುಲ್ ಗಾಂಧಿ ಅವರ ತಂಡದಲ್ಲಿರುವ ಹಾಗೂ ಎಐಸಿಸಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯೂ ಆದ ರಮ್ಯಾ ಅವರ ಹೆಸರು ಹಠಾತ್ ಉದ್ಭವಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಏಕೆಂದರೆ, ಮಹಿಳೆಯರ ಕೋಟಾದಲ್ಲಿ ಈ ಸ್ಥಾನಕ್ಕಾಗಿ ರಾಣಿ ಸತೀಶ್, ತಾರಾದೇವಿ ಸಿದ್ದಾರ್ಥ್ ಅವರಂತಹವರು ಯತ್ನ ನಡೆಸಿದ್ದಾರೆ. ಆದರೆ, ಅವರಿಗೆ ಹೈಕಮಾಂಡ್‌ನಲ್ಲಿ ಮನ್ನಣೆ ದೊರೆಯುವುದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ, ರಮ್ಯಾ ಅವರ ಹೆಸರು ಹಠಾತ್ ಕೇಳಿ ಬಂದಿದೆ. ಆದರೆ, ಅಂತಿಮವಾಗಿ ಹೈಕಮಾಂಡ್ ಯಾವ ನಿಲುವು ತಳೆಯುವುದು ಎಂಬುದನ್ನು ಕಾದು ನೋಡಬೇಕು.

ಸಂಪುಟಕ್ಕೆ ಯಾರು?

ಡಾ.ಜಿ.ಪರಮೇಶ್ವರ್, ಎಚ್.ವೈ. ಮೇಟಿಯಿಂದ ತೆರವಾದ ಹಾಗೂ ಎಚ್.ಎಸ್.ಮಹದೇವಪ್ರಸಾದ್ ನಿಧನದಿಂದ ಖಾಲಿಯಾಗಿರುವ ಸ್ಥಾನಗಳಿಗೆ ಆಕಾಂಕ್ಷಿಗಳು ಉತ್ತಮ ಸಂಖ್ಯೆಯಲ್ಲೇ ಇದ್ದಾರೆ. ಈ ಪೈಕಿ ಪರಮೇಶ್ವರ್ (ಎಸ್‌ಸಿ) ಅವರಿಂದ ತೆರವಾದ ಸ್ಥಾನಕ್ಕೆ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಎಂ. ಮೋಟಮ್ಮ ಹಾಗೂ ಆರ್.ಬಿ. ತಿಮ್ಮಾಪುರ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ನರೇಂದ್ರಸ್ವಾಮಿ, ತಿಮ್ಮಾಪುರ ಹೆಸರು ಗಂಭೀರವಾಗಿ ಕೇಳಿಬರುತ್ತಿದೆ. ಮಹಿಳೆಯರಿಗೆ ಈ ಸ್ಥಾನ ದೊರೆಯಬೇಕು ಎಂದು ಹೈಕಮಾಂಡ್ ಬಯಸಿದರೆ ಆಗ ಮೋಟಮ್ಮ ಅವಕಾಶ ಗಿಟ್ಟಿಸಬಹುದು ಎನ್ನಲಾಗುತ್ತಿದೆ.

 ಎಚ್.ಎಸ್. ಮಹದೇವಪ್ರಸಾದ್ (ಲಿಂಗಾಯತ) ಅವರಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಮಹದೇವಪ್ರಸಾದ್ ಪತ್ನಿ ಗೀತಾ ಮಹದೇವಪ್ರಸಾದ್, ತಿಪಟೂರು ಶಾಸಕ ಕೆ. ಷಡಕ್ಷರಿ, ಜಮಖಂಡಿ ಕ್ಷೇತ್ರದ ಸಿದ್ದು ನ್ಯಾಮಗೌಡ ಪ್ರಯತ್ನ ನಡೆಸುತ್ತಿದ್ದಾರೆ. ಎಚ್.ವೈ.ಮೇಟಿ ಅವರಿಂದ ತೆರವಾದ ಸ್ಥಾನಕ್ಕೆ ಹಿಂದುಳಿದ ವರ್ಗದಿಂದ ವಿಧಾನಪರಿಷತ್ ಸದಸ್ಯ ಎಚ್.ಎಂ. ರೇವಣ್ಣ, ಹೊಸದುರ್ಗ ಆಂಜಿನಪ್ಪ ಅವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಮೇಟಿ ಮತ್ತೊಮ್ಮೆ ಸಚಿವರಾಗುವ ಆಕಾಂಕ್ಷಿಯಾಗಿದ್ದರೂ ಅವರ ಹೆಸರು ಪರಿಗಣನೆಯಾಗುವುದೇ ಎಂಬುದನ್ನು ಕಾದು ನೋಡಬೇಕು.

ಗೃಹ ಖಾತೆ ಯಾರಿಗೆ?

ತಮ್ಮ ಬಳಿಯಿರುವ ಗೃಹ ಖಾತೆಯನ್ನು ಮುಖ್ಯಮಂತ್ರಿಯವರು ಬೇರೊಬ್ಬರಿಗೆ ವಹಿಸುವ ಬಗ್ಗೆ ಗಂಭೀರ ಚಿಂತನೆಯಲ್ಲಿದ್ದಾರೆ. ಆದರೆ, ಈ ಖಾತೆಯನ್ನು ಹೊಸದಾಗಿ ಸಚಿವರಾಗುವವರಿಗೆ ನೀಡಲಾಗುವುದೋ ಅಥವಾ ಸಂಪುಟದ ಹಿರಿಯ ಸಹೋದ್ಯೋಗಿಯೊಬ್ಬರಿಗೆ ನೀಡುವರೋ ಎಂಬ ಕುತೂಹಲವಿದೆ. ಮೂಲಗಳ ಪ್ರಕಾರ ಬಹುತೇಕ ಈ ಖಾತೆಯನ್ನು ಸಂಪುಟದ ಹಿರಿಯ ಸಚಿವರಿಗೆ ನೀಡುವ ಸಂಭವವೇ ಹೆಚ್ಚು. ಬಹುತೇಕ ರಮಾನಾಥ್ ರೈ ಅಥವಾ ರಮೇಶ್‌ಕುಮಾರ್ ಅವರ ಪೈಕಿ ಒಬ್ಬರಿಗೆ ಈ ಖಾತೆಯ ಹೊಣೆ ದೊರೆಯಬಹುದು ಎನ್ನಲಾಗುತ್ತಿದೆ.