ಹೊಸ ಹುದ್ದೆ ಸ್ವೀಕರಿಸಿದ ಬೆನ್ನಲ್ಲೇ, ರಾಹುಲ್ ಮೊದಲ ಅಗ್ನಿಪರೀಕ್ಷೆಗೂ ಒಳಪಡಬೇಕಾಗಿ ಬಂದಿದೆ. ಕಾರಣ, ರಾಹುಲ್ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳ ನಡುವೆ ಭಾರೀ ಪೈಪೋಟಿಯ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ಚುನಾವಣೆ ಗೆಲ್ಲಲು ರಾಹುಲ್ ಸಾಕಷ್ಟು ಕಾರ್ಯತಂತ್ರ ಕೂಡಾ ರೂಪಿಸಿದ್ದರು.
ನವದೆಹಲಿ(ಡಿ.17): ಕಾಂಗ್ರೆಸ್'ನ 16ನೇ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಶನಿವಾರ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ 132 ವರ್ಷ ಇತಿಹಾಸವುಳ್ಳ ಕಾಂಗ್ರೆಸ್'ನಲ್ಲಿ ಹೊಸ ಯುಗವೊಂದು ಆರಂಭವಾದಂತಾಯಿತು.
ಹೊಸ ಹುದ್ದೆ ಸ್ವೀಕರಿಸಿದ ಬೆನ್ನಲ್ಲೇ, ರಾಹುಲ್ ಮೊದಲ ಅಗ್ನಿಪರೀಕ್ಷೆಗೂ ಒಳಪಡಬೇಕಾಗಿ ಬಂದಿದೆ. ಕಾರಣ, ರಾಹುಲ್ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳ ನಡುವೆ ಭಾರೀ ಪೈಪೋಟಿಯ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ಚುನಾವಣೆ ಗೆಲ್ಲಲು ರಾಹುಲ್ ಸಾಕಷ್ಟು ಕಾರ್ಯತಂತ್ರ ಕೂಡಾ ರೂಪಿಸಿದ್ದರು. ಇದರ ಹೊರತಾಗಿಯೂ ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲುವಿನ ಸುಳಿವು ನೀಡಿವೆ. ಸೋಮವಾರ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಹೊಸ ಹುದ್ದೆ ವಹಿಸಿಕೊಂಡ ಆರಂಭದಲ್ಲೇ ರಾಹುಲ್ ಸಾಮರ್ಥ್ಯ ಒರೆಗೆ ಹಚ್ಚುವುದು ಖಚಿತವಾಗಲಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪವೇ ಸ್ವಲ್ಪ ಹೊಡೆತ ಬಿದ್ದರೂ, ಅದು ರಾಹುಲ್ ಪಾಲಿಗೆ ಬಹುದೊಡ್ಡ ಗೆಲುವಾಗಲಿದೆ.
ಒಂದು ವೇಳೆ ಬಿಜೆಪಿ ತನ್ನ ಸಾಮರ್ಥ್ಯ ವೃದ್ಧಿಸಿ ಕೊಂಡರೆ ಅದು ರಾಹುಲ್ ಸಾಮರ್ಥ್ಯದ ಮುಂದೆ ಮತ್ತೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಒಡ್ಡಲಿದೆ. ಹೀಗಾಗಿ ಸೋಮವಾರ ರಾಹುಲ್ ಪಾಲಿಗೆ ಬಹುದೊಡ್ಡ ದಿನವಾಗಲಿದೆ. ರಾಹುಲ್ ಗಾಂಧಿ 2004ರಿಂದ ಚುನಾವಣಾ ರಾಜಕೀಯಕ್ಕೆ ಧುಮುಕಿ 2007ರಿಂದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2013 ರಿಂದ ಪಕ್ಷದ ಉಪಾಧ್ಯಕ್ಷರಾಗಿದ್ದರು. ಇನ್ನು ಸೋನಿಯಾ ಕಳೆದ 19 ವರ್ಷಗಳಿಂದ ಪಕ್ಷವನ್ನು ಆಳುತ್ತಿದ್ದರು.
ಯುವಕರಿಗೆ ಮಣೆ: ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹಲವು ಹಿರಿಯ ತಲೆಗಳಿಗೆ ಪಕ್ಷದ ಉನ್ನತ ಹುದ್ದೆಯಿಂದ ಕೊಕ್ ನೀಡಿ ಯುವಕರಿಗೆ ಮಣೆ ಹಾಕಿದ್ದ ರಾಹುಲ್, ಇದೀಗ ಯುವ ಸಮೂಹಕ್ಕೆ ಇನ್ನಷ್ಟು ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಇದುವರೆಗೆ ಸೋನಿಯಾ ಆಪ್ತ ವಲಯದಲ್ಲಿ ಹಲವು ವರ್ಷಗಳಿಂದ ಕಾಣಿಸಿಕೊಂಡಿದ್ದ ನಾಯಕರಿಗೆ ಕೊಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
