ಭಾರತೀಯ ವಾಯುಪಡೆಯಲ್ಲಿನ ಮಾನವ ಶಕ್ತಿಯ ಕೊರತೆ ನೀಗಿಸಲು ಹಾಗೂ ಯುವಜನತೆಯಲ್ಲಿ ವಾಯುಯಾನ ಕ್ಷೇತ್ರದ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಏರೋಲಿಂಪಿಕ್ಸ್ ಸ್ಪರ್ಧೆ ಆಯೋಜಿಸಿದ್ದು,  ನಾಳೆ ರಂದು ಎಚ್‌ಎಎಲ್‌ನಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ಎಚ್‌ಎಎಲ್ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ವಿ. ಬಾಲಕೃಷ್ಣನ್ ತಿಳಿಸಿದ್ದಾರೆ.

ಬೆಂಗಳೂರು (ಡಿ.15): ಭಾರತೀಯ ವಾಯುಪಡೆಯಲ್ಲಿನ ಮಾನವ ಶಕ್ತಿಯ ಕೊರತೆ ನೀಗಿಸಲು ಹಾಗೂ ಯುವಜನತೆಯಲ್ಲಿ ವಾಯುಯಾನ ಕ್ಷೇತ್ರದ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಏರೋಲಿಂಪಿಕ್ಸ್ ಸ್ಪರ್ಧೆ ಆಯೋಜಿಸಿದ್ದು, ನಾಳೆ ಎಚ್‌ಎಎಲ್‌ನಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ಎಚ್‌ಎಎಲ್ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ವಿ. ಬಾಲಕೃಷ್ಣನ್ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವಿದ್ಯಾರ್ಥಿಗಳಿಗಾಗಿ ಐದು ವರ್ಷಗಳಿಂದ ಸತತವಾಗಿ ಈ ಸ್ಪರ್ಧೆ ನಡೆಸಿಕೊಂಡು ಬರಲಾಗುತ್ತಿದೆ. ರಾಷ್ಟ್ರಾದ್ಯಂತ 10,11ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಅಂತರಿಕ್ಷಯಾನ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಿ, ಅದನ್ನು ಅವರ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದರು.

ರಾಷ್ಟ್ರೀಯ ಏರೋಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ದೇಶದಾದ್ಯಂತ ಸುಮಾರು 600 ಕ್ಕೂ ಹೆಚ್ಚು ಶಾಲೆಗಳಿಗೆ ಕಳೆದ ಆಗಸ್ಟ್ ತಿಂಗಳಲ್ಲೇ ಆಹ್ವಾನ ನೀಡಲಾಗಿತ್ತು. ಸ್ಪರ್ಧೆಯ ಮೊದಲ ಹಂತದಲ್ಲಿ ಪ್ರತಿ ಶಾಲೆಯ 3 ವಿದ್ಯಾರ್ಥಿಗಳನ್ನು ಒಳಗೊಂಡ ಒಬ್ಬ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ನೌಕಾ ವಾಯುಯಾನ ಎಂಬ ಶೀರ್ಷಿಕೆಯಡಿ ಪ್ರಾಜೆಕ್ಟ್ ವರದಿಯನ್ನು ನ.25 ರೊಳಗೆ ಸಲ್ಲಿಸಲು ಕೋರಲಾಗಿತ್ತು. ಈ ಪೈಕಿ ವಿವಿಧ 9 ರಾಜ್ಯಗಳ 24 ವರದಿಗಳು ಸ್ಪರ್ಧೆಯ ದ್ವಿತೀಯ ಹಂತಕ್ಕೆ ಅರ್ಹತೆ ಪಡೆದಿವೆ ಎಂದು ಮಾಹಿತಿ ನೀಡಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಾರ್ವಜನಿಕ ಸಂಪರ್ಕಾಧಿಕಾರಿ ಕಾವೇರಪ್ಪ ಮಾತನಾಡಿ, ನಾಳೆ ನಡೆಯುವ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಸಿ.ಡಿ. ಬಾಲಾಜಿ, ಡಾ.ಸಿ.ಪಿ. ನಾರಾಯಣನ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.