ಲಿಂಗಾಯಿತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸುವ ಮತ್ತು ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸುವ ಕುರಿತು ನಾಳೆ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು, ವಿದ್ವಾಂಸರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ.

ಬೆಂಗಳೂರು (ಆ.09): ಲಿಂಗಾಯಿತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸುವ ಮತ್ತು ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸುವ ಕುರಿತು ನಾಳೆ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು, ವಿದ್ವಾಂಸರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ.

ಪ್ರಸ್ತುತ ದೇಶದಲ್ಲಿ ಆರು ಅಲ್ಪ ಸಂಖ್ಯಾತ ಧರ್ಮಗಳಿವೆ. ಏಳನೇಯ ಧರ್ಮವಾಗಿ ಲಿಂಗಾಯಿತ ಧರ್ಮ ಸೇರಬೇಕು ಅನ್ನೋದೇ ನಮ್ಮ ಉದ್ದೇಶ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ನಾಳೆ ನಡೆಯಲಿರುವ ಮಹತ್ವದ ಸಭೆಯಲ್ಲಿ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ. ಅಲ್ಲಿ ಲಿಂಗಾಯಿತ ಧರ್ಮದ ಬಗ್ಗೆ ಚರ್ಚೆ ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಹಿಂದೂ ಧರ್ಮಕ್ಕೂ, ಲಿಂಗಾಯಿತ ಧರ್ಮಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಶಿವ ಹಾಗೂ ಭಕ್ತಿ ವಿಚಾರದಲ್ಲಿ ಸಾಮ್ಯತೆ ಇದೆ ಅನ್ನೋದನ್ನ ಬಿಟ್ಟರೆ ಬೇರೆ ಯಾವುದರಲ್ಲೂ ಸಾಮ್ಯತೆ ಇಲ್ಲ. ವೀರಶೈವ ಎಂಬುದು ಲಿಂಗಾಯಿತ ಧರ್ಮದ ಒಳಪಂಗಡ. ಈ ಕುರಿತು ವಿದ್ವಾಂಸರು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ನಾಳೆ ಇದು ಚರ್ಚೆಯಾಗಲಿದೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.