ಕಳೆದೊಂದು ವಾರದಿಂದ ಟೊಮೆಟೊ ದರ ಏರು ಗತಿಯಲ್ಲಿ ಸಾಗಿದ್ದು, ಬೆಲೆ ಏರಿಕೆಯಿಂದ ಟೊಮೆಟೋವನ್ನು ಅಂಗಡಿಗಳಲ್ಲಿ ಖರೀದಿಸಲಾರದೆ ಗ್ರಾಹಕರು ತತ್ತರಿಸಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ಹೆಚ್ಚಾಗಿ ತಟ್ಟಿದೆ.

ಕೋಲಾರ (ನ.26): ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದರೆ, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಕಳೆದೊಂದು ವಾರದಿಂದ ಟೊಮೆಟೊದರ ಏರು ಗತಿಯಲ್ಲಿ ಸಾಗಿದ್ದು, ಬೆಲೆ ಏರಿಕೆಯಿಂದ ಟೊಮೆಟೋವನ್ನು ಅಂಗಡಿಗಳಲ್ಲಿ ಖರೀದಿಸಲಾರದೆ ಗ್ರಾಹಕರು ತತ್ತರಿಸಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ಹೆಚ್ಚಾಗಿ ತಟ್ಟಿದೆ. ಬೆಲೆ ಏರಿಕೆಯಿಂದಾಗಿ ಹೋಟೆಲ್ ಮಾಲೀಕರು ಆಹಾರ ಪದಾರ್ಥಗಳಿಗೆ ಟೊಮೆಟೊ ಬದಲಾಗಿ ನಿಂಬೆಹುಳಿ ಪುಡಿ ಬಳಸಲು ಆರಂಭಿಸಿದ್ದಾರೆ. ಇನ್ನು ಮನೆಗಳಲ್ಲಿ ಗೃಹಿಣಿಯರು ಟೊಮೆಟೊ ಬದಲು ಹುಣಸೆ ಹಣ್ಣು ಉಪಯೋಗಿಸುತ್ತಿದ್ದಾರೆ.

ಕೆಜಿ ಟೊಮೆಟೊಗೆ 60: ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ.ಬಾಕ್ಸ್ ಒಂದಕ್ಕೆ 7 ರಿಂದ 8 ಸಾವಿರ ರೂಗಳಿಗೆ ಬೆಲೆ ಏರಿಕೆಯಾಗಿದೆ. ರಿಟೇಲ್ ಮಾರುಕಟ್ಟೆಗಳಲ್ಲಿ ಕೆ.ಜಿ.ಟೊಮೆಟೋ 50 ರಿಂದ 60 ರೂಗಳವರೆಗೆ ಬೆಲೆ ಇದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ 80 ರೂ ಮೀರಿದೆ. ಸಧ್ಯ ಸೀಡ್ಸ್ ಟೊಮೆಟೋಗೆ ಹೆಚ್ಚಿನ ಬೆಲೆ ಇದ್ದು ಟೊಮೆಟೋ ಬೆಳೆದ ರೈತರಿಗೆ ಶುಕ್ರದೆಸೆ. ಬೆಲೆ ಇದೇ ರೀತಿ ಇದ್ದರೆ ಒಂದು ಹೆಕ್ಟೇರ್‌ನಲ್ಲಿ ಟೊಮೆಟೋ ಬೆಳೆದ ರೈತರಿಗೆ 5 ರಿಂದ 7 ಲಕ್ಷ ಲಾಭ ಗಳಿಸುವ ಸಾಧ್ಯತೆ ಇದೆ ಎಂದು ಮಾರಾಟಗಾರರು ಹೇಳುತ್ತಾರೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಜೂನ್‌ನಿಂದ ಆಗಸ್ಟ್ ಅಂತ್ಯದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತದೆ. ವಾರ್ಷಿಕ ಸರಾಸರಿ 6 ಲಕ್ಷ ಟನ್ ಟೊಮೆಟೊ ಉತ್ಪಾದನೆಯಾಗುತ್ತದೆ.

ಜಿಲ್ಲೆಯಿಂದ ಟೊಮೆಟೊ ರಫ್ತು: ಜಿಲ್ಲೆಯಿಂದ ರಾಜಸ್ಥಾನ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಕ್ಕೆ ಪ್ರತಿನಿತ್ಯ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಗಾನಿಸ್ತಾನ, ಪಾಕಿಸ್ತಾನ ಹಾಗೂ ಚೀನಾ ದೇಶಕ್ಕೂ ಟೊಮೆಟೊ ರಫ್ತಾಗುತ್ತದೆ. ಜಿಲ್ಲೆಯಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.40 ರಷ್ಟು ಹೆಚ್ಚಿನ ಮಳೆ ಆಗಿದ್ದರಿಂದ ಟೊಮೆಟೋ ಸೇರಿದಂತೆ ಬೆಳೆಗಳು ಹಾನಿಗೊಳಗಾದವು, ಅನೇಕ ಟೊಮೆಟೋ ತೋಟಗಳಲ್ಲಿ ನೀರು ನಿಂತಿತ್ತು. ಮಳೆ ಹೆಚ್ಚಾಗಿ ಬಿದ್ದು ವಾತಾವರಣದಲ್ಲಿ ತಂಪೇರಿದ್ದರಿಂದ ಟೊಮೆಟೋ ತೋಟಗಳಲ್ಲಿ ಹೆಚ್ಚಿಗೆ ರೋಗಗಳು ಕಾಣಿಸಿಕೊಂಡಿದ್ದರಿಂದ ತೋಟಗಳು ರೋಗಗಳಿಂದ ಹಾಳಾಗಿವೆ.

ಬೇರೆ ರಾಜ್ಯಗಳಲ್ಲಿ ಉತ್ಪಾದನೆ ಕುಸಿತ: ಬೆಳೆಗಳು ಹಾಳಾಗಿದ್ದರಿಂದ ಉತ್ಪಾದನೆ ಮೇಲೆ ಹೊಡೆತ ಬಿದ್ದಿದ್ದರಿಂದ ಬೆಲೆ ಏರಿಕೆಯಾಗಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಟೊಮೆಟೊ ಬೆಳೆಗೆ ಹಾನಿಯಾಗಿದೆ. ಹೀಗಾಗಿ ಹೊರ ಗಡೆಯಿಂದ ಸ್ಥಳೀಯ ಮಾರುಕಟ್ಟೆಗೆ ಟೊಮೆಟೊ ಬರುತ್ತಿಲ್ಲ. ಮತ್ತೊಂದೆಡೆ ಹೊರ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು, ಅಲ್ಲಿನ ವರ್ತಕರು ಜಿಲ್ಲೆಯ ಮಾರುಕಟ್ಟೆಗಳಲ್ಲಿ ಟೊಮೆಟೊ ಖರೀದಿಸಿಕೊಂಡು ಹೋಗುತ್ತಿದ್ದಾರೆ.

‘ಗುಜರಾತ್, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಟೊಮೆಟೊ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿದೆ. ಹೀಗಾಗಿ ಅಲ್ಲಿನ ವರ್ತಕರು ಟೊಮೆಟೊ ಖರೀದಿಗೆ ಜಿಲ್ಲೆಗೆ ಬರುತ್ತಿರುವುದರಿಂದ ಸ್ಥಳೀಯವಾಗಿ ಬೇಡಿಕೆ ಹೆಚ್ಚಿದೆ.

ಆವಕ ಹೆಚ್ಚಿದರೂ ಬೆಲೆ ಇಳಿದಿಲ್ಲ: ಆವಕ ಹೆಚ್ಚಿದ್ದರೂ ಬೆಲೆ ಮಾತ್ರ ಇಳಿಕೆಯಾಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಸಗಟು ಮತ್ತು ಚಿಲ್ಲರೆ ಮಾರಾಟ ದರ ದಿನದಿಂದ ದಿನಕ್ಕೆ ಏರುತ್ತಿದೆ. ಕಳೆದ 15 ದಿವಸಗಳ ಹಿಂದೆ ಟೊಮೆಟೊ ಚಿಲ್ಲರೆ ಮಾರಾಟ ದರ ಕೆ.ಜಿಗೆ 20 ರೂ ಇತ್ತು. ಈಗ ದರ 55ರ ಗಡಿ ದಾಟಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಬೆಲೆ ಕುಸಿತದಿಂದ ಟೊಮೆಟೊ ಕೇಳುವವರು ಇಲ್ಲದೆ ರೈತರು ಕಂಗಾಲಾಗಿದ್ದರು. ಆದರೆ, ಈಗ ಬೆಲೆ ಏರಿಕೆಯಿಂದ ರೈತರು ಸಂತಸಗೊಂಡಿದ್ದಾರೆ. ಪರಿಸ್ಥಿತಿ ನೋಡಿದರೆ ಇನ್ನೂ ಒಂದು ತಿಂಗಳು ಇದೆ ಬೆಲೆ ಇರುತ್ತವೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ವರದಿ: ಸತ್ಯರಾಜ್ ಜೆ. - ಕನ್ನಡ ಪ್ರಭ