ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಬೆನ್ನಲ್ಲೇ ಮಂಗಳೂರಿನಲ್ಲಿ ಹಿಂಸಾಚಾರ ಭುಗಿಲೆದ್ದಿದೆ.  ಅಲ್ಲಲ್ಲಿ ಬಸ್​ಗೆ ಕಲ್ಲು ತೂರಾಟದ ಜೊತೆಗೆ ಇಬ್ಬರ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ನಡುವೆ ಇಂದು ದೀಪಕ್ ಶವಯಾತ್ರೆ ನಡೆಯಲಿದ್ದು, ಹಿಂದೂ ಪರ ಸಂಘಟನೆಗಳು ಸುರತ್ಕಲ್ ಬಂದ್​​ಗೂ ಕರೆ ನೀಡಿದೆ.

ಮಂಗಳೂರು (ಜ.04): ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಬೆನ್ನಲ್ಲೇ ಮಂಗಳೂರಿನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲಲ್ಲಿ ಬಸ್​ಗೆ ಕಲ್ಲು ತೂರಾಟದ ಜೊತೆಗೆ ಇಬ್ಬರ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ನಡುವೆ ಇಂದು ದೀಪಕ್ ಶವಯಾತ್ರೆ ನಡೆಯಲಿದ್ದು, ಹಿಂದೂ ಪರ ಸಂಘಟನೆಗಳು ಸುರತ್ಕಲ್ ಬಂದ್​​ಗೂ ಕರೆ ನೀಡಿದೆ.

ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಬೆನ್ನಲ್ಲೇ ಮಂಗಳೂರು ಉದ್ವಿಗ್ನಗೊಂಡಿದೆ. ಅಲ್ಲದೇ ನಗರದ ಅಲ್ಲಲ್ಲಿ ತಡರಾತ್ರಿ ಹಿಂಸಾಚಾರಗಳು ಸಂಭವಿಸಿದ್ದು, ಬಸ್​ಗಳಿಗೆ ಕಲ್ಲು ತೂರಾಟ ಕೂಡ ನಡೆದಿದೆ. ದೀಪಕ್ ರಾವ್ ಹತ್ಯೆ ಬೆನ್ನಲ್ಲೇ ಸುರತ್ಕಲ್ ಬಳಿ ಕಿಡಿಗೇಡಿಗಳ ತಂಡ ಖಾಸಗಿ ಬಸ್​​ಗೆ ಕಲ್ಲು ತೂರಿದ ಪರಿಣಾಮ ಸುರತ್ಕಲ್ ಪೇಟೆ ಸಂಜೆ ಹೊತ್ತಿಗಾಗಲೇ ಸಂಪೂರ್ಣ ಬಂದ್ ಆಗಿತ್ತು. ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಕೂಡಾ ನಡೆದಿದೆ. ರಾತ್ರಿ 9 ಘಂಟೆ ಸುಮಾರಿಗೆ ಸುರತ್ಕಲ್​ನಲ್ಲಿ ನಡೆದುಕೊಂಡು ಬರ್ತಾ ಇದ್ದ 22 ವರ್ಷದ ಮುದಸ್ಸಿರ್ ಎಂಬಾತನ ಮೇಲೆ ತಲ್ವಾರ್ ದಾಳಿ ನಡೆದಿದ್ದು, ಆತನ ತಲೆ ಭಾಗಕ್ಕೆ ಗಂಭೀರ ಗಾಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಮತ್ತೆ ರಾತ್ರಿ 10.30ರ ಸುಮಾರಿಗೆ ಕೊಟ್ಟಾರ ಚೌಕಿ ಎಂಬಲ್ಲಿ ಆಕಾಶ ಭವನ ನಿವಾಸಿ 48 ವರ್ಷದ ಬಶೀರ್ ಎಂಬುವವರ ಮೇಲೂ ದಾಳಿ ನಡೆಸಿದ್ದು ಅವರ ಸ್ಥಿತಿಯೂ ಗಂಭೀರವಾಗಿದೆ. ಘಟನೆ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಕಮಲ್ ಪಂಥ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಘಟನೆ ಖಂಡಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮತ್ತು ಬಿಜೆಪಿ ಸುರತ್ಕಲ್ ವ್ಯಾಪ್ತಿಯಲ್ಲಿ ಬಂದ್​​ಗೆ ಕರೆ ನೀಡಿದೆ.

ಇಂದು ಬಿಜೆಪಿ ಮತ್ತು ಸಂಘಪರಿವಾರ ನಗರದ ಎಜೆ ಆಸ್ಪತ್ರೆಯಿಂದ ದೀಪಕ್ ಶವಯಾತ್ರೆ ನಡೆಸಲು ಸಿದ್ದತೆ ನಡೆಸಿದೆ. ಆದರೆ ಇದಕ್ಕೆ ಅನುಮತಿ ನೀಡದ ಪೊಲೀಸ್ ಇಲಾಖೆ ನಿನ್ನೆ ರಾತ್ರಿಯಿಂದ ಇಂದು ರಾತ್ರಿಯವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 35ರಡಿ ನಿರ್ಬಂಧಕಾಜ್ಞೆ ವಿಧಿಸಿ ಆದೇಶ ನೀಡಿದೆ. ಆದರೆ ಸಂಘ-ಪರಿವಾರ ಮಾತ್ರ ಯಾತ್ರೆ ನಡೆಸಲು ಸಿದ್ದತೆ ನಡೆಸುತ್ತಿದೆ. ಹೀಗಾಗಿ ಸುರತ್ಕಲ್'ನಲ್ಲಿ 6 ಕೆಎಸ್​ಆರ್​ಪಿ ಸೇರಿ ಐನೂರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.