ಕೇಂದ್ರ ಸರ್ಕಾರವು ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಡಿಜಿಧನ್‌ ಮೇಳವು ಅಂಬೇಡ್ಕರ್‌ ಜಯಂತಿ ದಿನವಾದ ಶುಕ್ರವಾರ ಶತ ದಿನಗಳನ್ನು ಪೂರೈಸಲಿದೆ. ಈ ಆಚರಣೆಗೆ ಸನ್ನದ್ಧವಾಗಿರುವ ದೇಶದ ಎಲ್ಲಾ ಬ್ಯಾಂಕ್‌ ಶಾಖೆಗಳು ಇಂದು ತಮ್ಮ ಬ್ಯಾಂಕ್‌ ಶಾಖೆಯ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನಿಷ್ಠ 5ರಿಂದ 10 ವರ್ತಕರನ್ನು ಡಿಜಿಟಲ್‌ ವ್ಯವಹಾರಕ್ಕೆ ನೋಂದಣಿಗೊಳಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೂ ಕೇಂದ್ರದ ನೀತಿ ಆಯೋಗ ಆದೇಶ ನೀಡಿದೆ.
ಬೆಂಗಳೂರು(ಏ.14): ನೋಟು ಅಮಾನ್ಯೀಕರಣದಿಂದ 500 ಮತ್ತು 1000 ರೂ. ನೋಟು ಮುಖಬೆಲೆಯ ನೋಟುಗಳು ರದ್ದುಗೊಂಡ ಬಳಿಕ ನಗದು ರಹಿತ ಆರ್ಥಿಕತೆ (ಕ್ಯಾಶ್ಲೆಸ್ ಎಕಾನಮಿ)ಯತ್ತ ದೇಶ ಈಗಾಗಲೇ ಮುಂದಡಿ ಇಟ್ಟಿದ್ದು, ಶುಕ್ರವಾರ ದೇಶಾದ್ಯಂತ ಬ್ಯಾಂಕ್ ಶಾಖೆಗಳು ಡಿಜಿಟಲೀಕರಣದ ಬೃಹತ್ ಅಭಿಯಾನ ಆರಂಭಿಸಲಿವೆ.
ಪ್ರತಿಯೊಂದು ಬ್ಯಾಂಕ್ ಶಾಖೆ ತನ್ನ ವ್ಯಾಪ್ತಿಯ ಕನಿಷ್ಠ 5 ವರ್ತಕರನ್ನು ಡಿಜಿಟಲ್ ವ್ಯವಹಾರ ವೇದಿಕೆಗೆ ಕರೆ ತರಲಿದ್ದು, ದೇಶದಾದ್ಯಂತ 5 ಲಕ್ಷಕ್ಕೂ ಹೆಚ್ಚು ವರ್ತಕರು ಡಿಜಿಟಲ್ ವ್ಯವಹಾರ ಆರಂಭಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ 10 ಸಾವಿರಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ವರ್ತಕರು ಶುಕ್ರವಾರದಿಂದ ಆಧಾರ್ ಆಧರಿತ ಡಿಜಿಟಲ್ ವ್ಯವಹಾರ ಆರಂಭಿಸಲಿದ್ದಾರೆ.
ನೋಟು ಅಮಾನ್ಯ ಘೋಷಣೆ ಬಳಿಕ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಡಿ.30 ರಂದು ಹೊಸ ವರ್ಷಕ್ಕೆ ಮುನ್ನಾದಿನ ಭೀಮ್ ಆ್ಯಪ್ ಬಿಡುಗಡೆ ಮಾಡಿದ್ದರು. ನಗದು ವ್ಯವಹಾರಕ್ಕೆ ಪರ್ಯಾಯವಾಗಿ ಬಳಕೆ ಮಾಡಬಹುದಾದ ಈ ಆ್ಯಪ್ ಆಧಾರ್ ಕಾರ್ಡ್ಗೆ ಜೋಡಣೆ ಮಾಡಲಾಗಿದ್ದು (ಲಿಂಕ್) ದೇಶಾದ್ಯಂತ ಮೊಬೈಲ್ ಫೋನ್ಗಳ ಮೂಲಕ ವ್ಯವಹಾರ ನಡೆಸಬಹುದಾಗಿತ್ತು. ಸಣ್ಣ ಪುಟ್ಟವರ್ತಕರು ಕೂಡ ಈ ಆ್ಯಪ್ ಮೂಲಕವೇ ವ್ಯಾಪಾರ ಮಾಡಲು ಅವಕಾಶವಿದೆಯಲ್ಲದೇ ಈ ಆ್ಯಪ್ ಆಧರಿತ ವ್ಯಾಪಾರ ಮಾಡಿದ ವರ್ತಕರು ಹಾಗೂ ಗ್ರಾಹಕರಿಗೆ ಭಾರೀ ಪ್ರಮಾಣದ ಬಹುಮಾನಗಳನ್ನೂ ಘೋಷಣೆ ಮಾಡಲಾಗಿತ್ತು.
ಕ್ಯಾಶ್ ಲೆಸ್ ಎಕಾನಮಿ(ನಗದು ರಹಿತ ಆರ್ಥಿಕ ವ್ಯವಸ್ಥೆ) ಜಾರಿಗೆ ತರುವ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ, ಇದೀಗ ಲೆಸ್ ಕ್ಯಾಶ್ ಎಕಾನಮಿ ಎಂಬ ಘೋಷವಾಕ್ಯದೊಂದಿಗೆ ನೀತಿ ಆಯೋಗದ ಮೂಲಕ ಭೀಮ್ ಆ್ಯಪ್ ಬಳಕೆಯನ್ನು ಜನಪ್ರಿಯಗೊಳಿಸುವ ಅಭಿಯಾನ ಆರಂಭಿಸುತ್ತಿದೆ. ಬ್ಯಾಂಕ್ಗಳಿಗೆ ಈ ನಿಟ್ಟಿನಲ್ಲಿ ಗುರಿ ನಿಗದಿ ಮಾಡಿರುವ ಕೇಂದ್ರವು ಇದಕ್ಕಾಗಿಯೇ ಮೊದಲಿಗೆ ಪ್ರೋತ್ಸಾಹಕರ ಬಹುಮಾನ ಯೋಜನೆಘೋಷಿಸಿ ಹೆಚ್ಚು ಹೆಚ್ಚು ಜನರು ಹಾಗೂ ವರ್ತಕರು ಈ ಆ್ಯಪ್ ಬಳಕೆ ಮಾಡುವಂತೆ ಪ್ರೋತ್ಸಾಹಿಸಿತ್ತು.
ಈಗಾಗಲೇ 14 ಲಕ್ಷ ಜನರು ಹಾಗೂ 77 ಸಾವಿರ ವರ್ತಕರಿಗೆ ಬಹುಮಾನಗಳನ್ನು ನೀಡಿರುವುದಾಗಿ ನೀತಿ ಆಯೋಗ ಪ್ರಕಟಣೆ ತಿಳಿಸಿದೆ. ಇದರ ಬೆನ್ನಲ್ಲೇ ಮೆಗಾ ಡ್ರಾ ಏಪ್ರಿಲ್ 14ರಂದು ನಡೆಯಲಿದೆ.
ನೋಟು ಅಮಾನ್ಯದ ಬಳಿಕ ಶೇ.584ರಷ್ಟುಪ್ರಮಾಣದಲ್ಲಿ ನಗದು ರಹಿತ ವ್ಯವಹಾರ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಹೆಚ್ಚಳವಾಗಿದ್ದು, ಆಧಾರ್ ಆಧರಿತ ಪಾವತಿ ದಾಖಲೆ 1,352%ದಷ್ಟುಪ್ರಮಾಣದಲ್ಲಾಗಿದೆ ಎಂದು ನೀತಿ ಆಯೋಗ ಹೇಳು ತ್ತದೆ. ಇದೀಗ ಸುಮಾರು 8 ಸಾವಿರ ಕೋಟಿ ವ್ಯವ ಹಾರಗಳು ವಾರ್ಷಿಕವಾಗಿ ಡಿಜಿಟಲ್ ಮೂಲಕ ನಡೆ ಯುತ್ತಿದ್ದು ಈ ಸಂಖ್ಯೆಯನ್ನು ಈ ಆರ್ಥಿಕ ವರ್ಷ ದಲ್ಲೇ 2500 ಕೋಟಿಗೇರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಈ ಮೂಲಕ ಕಪ್ಪುಹಣಕ್ಕೆ ಸಂಪೂರ್ಣ ಇತಿಶ್ರೀ ಹಾಡುವ ಗುರಿ ಹೊಂದಲಾಗಿದೆ.
- ಪ್ರಶಾಂತ್ ಕುಮಾರ್ ಎಂ.ಎನ್, ಕನ್ನಡಪ್ರಭ
--
