ರಾಜ್ಯ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ನೇತೃತ್ವದ ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ರೂಪಿಸಿದ್ದ ಮಸೂದೆಗೆ ಈ ಹಿಂದೆ ವಿಧಾನಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಬೆಳಗಾವಿ(ನ.15): ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಮಹತ್ವಾಕಾಂಕ್ಷೆಯ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಮಂಡನೆಗೆ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರವೆದ್ದಿದ್ದು, ಇಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ.
ಶಾಸಕರ ಅಭಿಪ್ರಾಯ ಪಡೆದು ಬಹುಮತದ ಆಧಾರದಲ್ಲಿ ಮಸೂದೆ ಭವಿಷ್ಯ ನಿರ್ಧರಿಸಲು ಸಿಎಂ ಸಿದ್ದರಾಮಯ್ಯ ಬೆಳಗ್ಗೆ 9 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ರಾಜ್ಯ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ನೇತೃತ್ವದ ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ರೂಪಿಸಿದ್ದ ಮಸೂದೆಗೆ ಈ ಹಿಂದೆ ವಿಧಾನಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಆ ಬಳಿಕ ಅದನ್ನು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ನೇತೃತ್ವದ ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿತ್ತು. ಬಹುತೇಕ ಸಚಿವರು ಹಾಗೂ ಶಾಸಕರಿಗೆ ಈ ಮಸೂದೆಯನ್ನು ಸದನದಲ್ಲಿ ಮಂಡಿಸುವ ಬಗ್ಗೆ ತಕರಾರಿದೆ. ಶತಾಯಗತಾಯ ತಡೆಯಬೇಕು ಎಂದು ಲಾಬಿ ಮಾಡುತ್ತಿದ್ದಾರೆ. ಆರೋಗ್ಯ ಸಚಿವರು ಇದನ್ನು ಪ್ರತಿಷ್ಠೆ ಪ್ರಶ್ನೆಯಾಗಿ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಈ ಮಸೂದೆ ಮಂಡನೆ ಮಾಡಬಾರದು ಎಂದು ಆಗ್ರಹಿಸಿ ವೈದ್ಯರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದನದಲ್ಲಿ ಮಸೂದೆ ಮಂಡನೆಗೆ ಅವಕಾಶ ಕೊಡದಂತೆ ಶಾಸಕರ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ. ವೈದ್ಯರ ಒತ್ತಡಕ್ಕೆ ಮಣಿದಿರುವ ಶಾಸಕರು ಯಾವುದೇ ಕಾರಣಕ್ಕೂ ಮಸೂದೆಗೆ ಹಸಿರು ನಿಶಾನೆ ತೋರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದಿದ್ದಾರೆ.
