ಇಂದಿನಿಂದ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಎಲೆಕ್ಷನ್ ವಾರ್ ಅಧಿಕೃತವಾಗಿ ಶುರುವಾಗುತ್ತಿದೆ. ಎರಡು ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಧುಮುಕುತ್ತಿದ್ದಾರೆ.

ಮೈಸೂರು(ಮಾ.20): ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಈಗಾಗಲೇ ಕಾರ್ಯಕರ್ತರು 2 ಕ್ಷೇತ್ರಗಳಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದಾರೆ. ಇಂದು ಪ್ರಮುಖ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲಿದ್ದು ಚುನಾವಣಾ ಕಣ ಮತ್ತಷ್ಟು ಬಿಸಿಹೇರಲಿದೆ.

ಇಂದಿನಿಂದ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಎಲೆಕ್ಷನ್ ವಾರ್ ಅಧಿಕೃತವಾಗಿ ಶುರುವಾಗುತ್ತಿದೆ. ಎರಡು ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಧುಮುಕುತ್ತಿದ್ದಾರೆ.

ಸಿದ್ದರಾಮಯ್ಯಗೆ ಸೆಡ್ಡು ಹೊಡೆದಿರುವ ಶ್ರೀನಿವಾಸ್ ಪ್ರಸಾದ್ ನಂಜನಗೂಡು ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಕೂಡ ಇಂದೇ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಕ್ಷೇತ್ರದಲ್ಲಿ ಪ್ರಚಾರ ಭರಾಟೆ ಮತ್ತಷ್ಟು ಜೋರಾಗಲಿದೆ. ಸಿದ್ದರಾಮಯ್ಯ - ಶ್ರಿನಿವಾಸ್ ಪ್ರಸಾದ್ ನಡುವಿನ ಸಮರವೆಂದೇ ಹೇಳಲಾಗುತ್ತಿದ್ದು ಯಾರು ಗೆಲುವು ಸಾಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿದೆ.

ಇನ್ನು ಸಚಿವ ಮಹದೇವ್​ ಪ್ರಸಾದ್​ ಅಕಾಲಿಕ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ಕ್ಷೇತ್ರದಲ್ಲೂ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇಲ್ಲಿಯೂ ಕೂಡ ಕಾಂಗ್ರೆಸ್​ ಹಾಗೂ ಬಿಜೆಪಿ ಅಭ್ಯರ್ಥಿಗಳು ಇಂದು ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ನಿರಂಜನ್​ ಕುಮಾರ್​ ಬೆಳಿಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಕಾಂಗ್ರೆಸ್​ನ ಗೀತಾ ಮಹದೇವ್​ ಪ್ರಸಾದ್​ ನಂತರ ನಾಮಪತ್ರ ಸಲ್ಲಿಸಲಿದ್ದಾರೆ. ಗುಂಡ್ಲುಪೇಟೆಯಲ್ಲಿ ಗೀತಾಗೆ ಅನುಕಂಪದ ಅಲೆ ಇದ್ದರೆ, ಸತತವಾಗಿ ಸೋಲುಂಡಿರುವ ನಿರಂಜನ್​ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಒಟ್ಟಾರೆ ಎರಡೂ ಕ್ಷೇತ್ರಗಳು ರಾಷ್ಟ್ರೀಯ ಪಕ್ಷಗಳ ಪ್ರತಿಷ್ಟೆಯ ಕಣವಾಗಿದ್ದರೂ, ಮಾಜಿ ಸಚಿವ ಶ್ರೀನಿವಾಸ್​ ಪ್ರಸಾದ್ ಬಿಜೆಪಿಯಿಂದ​ ಸ್ಪರ್ಧೆ ಮಾಡಿರುವುದರಿಂದ ನಂಜನಗೂಡು ಕ್ಷೇತ್ರ ಎಚ್ಚು ಗಮನ ಸೆಳೆಯುತ್ತಿದೆ.