Asianet Suvarna News Asianet Suvarna News

ಕಪ್ಪುಹಣ ಹರಿವು ತಡೆಯಲು ಕೇಂದ್ರ ಸರ್ಕಾರದಿಂದ ಇನ್ನಷ್ಟು ಕ್ರಮ ಘೋಷಣೆ

ರದ್ದಾದ ನೋಟುಗಳನ್ನು ಬ್ಯಾಂಕ್‌'ಗಳಲ್ಲಿ ಠೇವಣಿ ಇಡಲು ನೀಡಲಾದ 50 ದಿನಗಳ ಅವಧಿ (ಡಿ.31)ಯಲ್ಲಿ ಒಂದೇ ದಿನ 50 ಸಾವಿರ ರೂ.ಗೂ ಹೆಚ್ಚು ಹಣ ಠೇವಣಿ ಇಟ್ಟರೆ ಮತ್ತು 50 ದಿನದ ಅವಧಿಯಲ್ಲಿ ಉಳಿತಾಯ ಖಾತೆಗಳಿಗೆ 2.5 ಲಕ್ಷಕ್ಕಿಂತ ಹೆಚ್ಚು ಜಮಾ ಮಾಡಿದರೆ ಅಂಥವರ ಮಾಹಿತಿಯನ್ನು ತೆರಿಗೆ ಇಲಾಖೆ ನೀಡುವಂತೆ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

To Stop Black Money Govt Introducing More Rules

ನವದೆಹಲಿ(ನ.17): ಹಳೆಯ 500 ರೂ. ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಿದ ಬಳಿಕ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳುವ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ.

ರದ್ದಾದ ನೋಟುಗಳನ್ನು ಬ್ಯಾಂಕ್‌'ಗಳಲ್ಲಿ ಠೇವಣಿ ಇಡಲು ನೀಡಲಾದ 50 ದಿನಗಳ ಅವಧಿ (ಡಿ.31)ಯಲ್ಲಿ ಒಂದೇ ದಿನ 50 ಸಾವಿರ ರೂ.ಗೂ ಹೆಚ್ಚು ಹಣ ಠೇವಣಿ ಇಟ್ಟರೆ ಮತ್ತು 50 ದಿನದ ಅವಧಿಯಲ್ಲಿ ಉಳಿತಾಯ ಖಾತೆಗಳಿಗೆ 2.5 ಲಕ್ಷಕ್ಕಿಂತ ಹೆಚ್ಚು ಜಮಾ ಮಾಡಿದರೆ ಅಂಥವರ ಮಾಹಿತಿಯನ್ನು ತೆರಿಗೆ ಇಲಾಖೆ ನೀಡುವಂತೆ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಈ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಲಾಗಿದ್ದು, ಈ ಅವಧಿಯಲ್ಲಿ 12.50 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣ ಠೇವಣಿ ಇಟ್ಟವರ ಖಾತೆಗಳ ವಿವರವನ್ನೂ ತೆರಿಗೆ ಇಲಾಖೆಗೆ ನೀಡುವಂತೆ ಬ್ಯಾಂಕ್‌, ಸಹಕಾರಿ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಿಗೆ ತಿಳಿಸಲಾಗಿದೆ.

ಹೆಚ್ಚು ದುಡ್ಡಿನ ಜನಧನ ಖಾತೆಗೆ ಶೇ.200 ದಂಡ!

ಒಂದು ವೇಳೆ ಜನಧನ ಖಾತೆಯಲ್ಲಿ ದಾಖಲೆಗಳಿಲ್ಲದೇ ಭಾರೀ ಪ್ರಮಾಣದಲ್ಲಿ ಹಣವನ್ನು ಠೇವಣಿ ಇಟ್ಟಿದ್ದು ಕಂಡು ಬಂದರೆ ಶೇ. 30ರಷ್ಟು ತೆರಿಗೆ, 12ರಷ್ಟು ಬಡ್ಡಿ ಮತ್ತು ಶೇ. 200ರಷ್ಟು ದಂಡ ಬೀಳಲಿದೆ. ಕಪ್ಪುಹಣದ ಠೇವಣಿ ಇಡಲು ಬಳಕೆಯಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ, ಜನಧನ ಖಾತೆಗಳಲ್ಲಿ ಹಣದ ಏರಿಕೆಯ ಮೇಲೆಯೂ ಕಣ್ಣಿಟ್ಟಿದೆ.

1 ಲಕ್ಷ ಎಟಿಎಂಗಳಲ್ಲಿ ಶೀಘ್ರ ಹೊಸ ನೋಟು

ದೇಶದ ಅರ್ಧದಷ್ಟು ಎಟಿಎಂಗಳ ಮರುಪೂರಣಗೊಳಿಸಲು ಇನ್ನೊಂದು ವಾರ ಬೇಕಾಗಲಿದ್ದು, 2 ಲಕ್ಷ ಎಟಿಎಂಗಳ ಪೈಕಿ ಒಂದು ಲಕ್ಷದಷ್ಟು ಎಟಿಎಂಗಳಲ್ಲಿ ಮುಂದಿನ ವಾರದಿಂದ 500 ರೂ. ಮತ್ತು 2000 ರೂ. ನೋಟುಗಳು ಲಭ್ಯವಾಗಲಿವೆ ಎಂದು ಸರ್ಕಾರ ಹೇಳಿದೆ.

ಇನ್ನೂ ಒಂದು ವಾರ ಪರದಾಟ

ಬ್ಯಾಂಕ್‌ ಮತ್ತು ಎಟಿಎಂಗಳಲ್ಲಿ ಹಣದ ಪೂರೈಕೆ ಇನ್ನೂ ಸಮರ್ಪಕವಾಗಿ ಆಗದೇ ಇರುವ ಕಾರಣ ಹಣ ಪಡೆಯಲು ಜನರು ಕನಿಷ್ಠವೆಂದರೂ ಇನ್ನೂ ಒಂದು ವಾರ ಪರದಾಡಬೇಕಾಗುತ್ತದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ. ಬ್ಯಾಂಕ್‌ಗಳಲ್ಲಿ ಸಾಕಷ್ಟು ಹಣದ ಹರಿವು ಲಭ್ಯವಾಗಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದು, ಇದರ ಆಧಾರ ಗುಪ್ತಚರ ಇಲಾಖೆ ವರದಿ ನೀಡಿದೆ.

2 ಗಂಟೆಗೊಮ್ಮೆ ಪರಿಸ್ಥಿತಿಯ ಮೇಲೆ ನಿಗಾ

ಹಳೆಯ 500 ರೂ. ಮತ್ತು 1000 ರೂ. ನೋಟು ರದ್ದಾಗಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಪ್ರತಿ ಎರಡು ಗಂಟೆಗಳಿಗೊಮ್ಮೆ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ. ಗೃಹ ಸಚಿವಾಲಯದ ಕಂಟ್ರೋಲ್‌ ರೂಂ, ಎಲ್ಲಾ ರಾಜ್ಯಗಳಿಂದಲೂ ಪ್ರತಿ ಎರಡು ಗಂಟೆಗಳಿಗೊಮ್ಮೆ ಮಾಹಿತಿ ತರಿಸಿಕೊಳ್ಳುತ್ತಿದೆ.

Follow Us:
Download App:
  • android
  • ios