ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ, ‘ಕರ್ನಾಟಕ ಸರ್ಕಾರ ಕುಡಿಯುವ ನೀರು ಮತ್ತು ವಿದ್ಯುತ್‌ ಯೋಜನೆಗೆ ಮೇಕೆದಾಟು ಬಳಿ 5912 ಕೋಟಿ ರು. ವೆಚ್ಚದಲ್ಲಿ 66 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣಕ್ಕೆ ನಿರ್ಧರಿಸಿದೆ.

ಚೆನ್ನೈ(ಫೆ.26): ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಲು ನಿರ್ಧರಿಸಿರುವುದಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದೊಂದು ಏಕಪಕ್ಷೀಯ ನಿರ್ಧಾ​ರ​ವಾಗಿದ್ದು, ಈ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ, ‘ಕರ್ನಾಟಕ ಸರ್ಕಾರ ಕುಡಿಯುವ ನೀರು ಮತ್ತು ವಿದ್ಯುತ್‌ ಯೋಜನೆಗೆ ಮೇಕೆದಾಟು ಬಳಿ 5912 ಕೋಟಿ ರು. ವೆಚ್ಚದಲ್ಲಿ 66 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣಕ್ಕೆ ನಿರ್ಧರಿಸಿದೆ. ಅದಕ್ಕೆ ಅನುಮೋದನೆ ಪಡೆಯಲು ಕರ್ನಾಟಕವು ಕೇಂದ್ರೀಯ ಜಲ ಆಯೋಗ, ಸುಪ್ರೀಂಕೋರ್ಟ್‌ನ ಮೇಲ್ವಿಚಾರಣಾ ಸಮಿತಿ, ಕೇಂದ್ರ ಪರಿಸರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ವರದಿಗಳು ತಮಿಳುನಾಡಿನ ಜನರ ಆತಂಕಕ್ಕೆ ಕಾರಣವಾಗಿದೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ. ‘ಕಾವೇರಿ ಜಲ ವಿವಾದ ನ್ಯಾಯಾಧಿಕರಣದ 2007ರ ಅಂತಿಮ ಐತೀರ್ಪಿನ ವಿರುದ್ಧ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಮೇಲ್ಮನವಿ ಸಲ್ಲಿಸಿವೆ. 
ಅದೇ ರೀತಿ ತಮಿಳುನಾಡು ಸರ್ಕಾರ ಕೂಡ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಿದೆ. ಈ ಅರ್ಜಿಗಳ ವಿಚಾರಣೆ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಸಂಪೂರ್ಣ ವಿಷಯ ವಿಚಾ​ರಣೆಗೆ ಒಳಪಟ್ಟಿದೆ' ಎಂದು ಹೇಳಿದ್ದಾರೆ. ‘ಮೇಕೆ​ದಾಟು ಯೋಜ​ನೆಯ ನಿರ್ಮಾಣ ಯೋಜನೆಯ ವಿಷ​ಯ​​ವನ್ನು ಹಂಚಿ​​​ಕೊಳ್ಳ​​ಬೇಕು ಮತ್ತು ಯಾವುದೇ ಯೋಜ​ನೆ​​ಯನ್ನು ಕೈಗೊ​ಳ್ಳುವ ಮುನ್ನ ಮಂಡಳಿಯ ಗಮನಕ್ಕೆ ತರಬೇಕು ಎಂದು ಕರ್ನಾಟಕಕ್ಕೆ ಸೂಚಿಸ​ಲಾಗಿತ್ತು. ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡದೇ ಯಾವುದೇ ಯೋಜನೆ​ಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಕರ್ನಾಟಕ ಸರ್ಕಾರ ಭರವಸೆ ನೀಡಿತ್ತು. 
ಈಗ ಕರ್ನಾಟಕ ಸರ್ಕಾರ ಏಕಪಕ್ಷೀಯವಾಗಿ ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಲು ಹೊರಟಿ​ರುವುದು ಕಾವೇರಿ ನ್ಯಾಯ​ಮಂಡಳಿಯ ಆದೇಶದ ಉಲ್ಲಂ​ಘನೆ​​​ಯಾಗಿದೆ' ಎಂದು ಪಳನಿಸ್ವಾಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.