ನವದೆಹಲಿ(ಜು.03): ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಯನ್ನು ಇಡೀ ಜಗತ್ತೇ ಖಂಡಿಸುತ್ತಿದೆ. ಅದರಂತೆ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆಯ ಬಾಲಾಕೋಟ್ ವಾಯುದಾಳಿಯನ್ನೂ ಇಡೀ ವಿಶ್ವ ಪ್ರಶಂಸಿಸುತ್ತಿದೆ.

ಆದರೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾತ್ರ ಪುಲ್ವಾಮಾ ದಾಳಿಕೋರನನ್ನು 20 ವರ್ಷದ ಬಾಲಕ ಎಂದು ಕರೆದು ಮಂಗಳಾತರಿ ಮಾಡಿಸಿಕೊಂಡಿದ್ದಾರೆ. ಖಾಸಗಿ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಮಹುವಾ ಮೊಯಿತ್ರಾ ಪುಲ್ವಾಮಾ-ಬಾಲಾಕೋಟ್ ನಡುವೆ ಗೊಂದಲ ಮೂಡಿಸಿ ವಿವಾದಕ್ಕೆ ಕಾರಣವಾಗಿದ್ದಾರೆ.

ಪುಲ್ವಾಮಾ ದಾಳಿಯನ್ನು ಭದ್ರತಾ ವೈಫಲ್ಯ ಎಂದು ಕರೆದಿರುವ ಮಹುವಾ, ದಾಳಿಕೋರನನ್ನು 20 ವರ್ಷದ ಬಾಲಕ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದೇ ವೇಳೆ ಪುಲ್ವಾಮಾ ದಾಳಿ ಎಂದು ಹೇಳುವ ಬದಲು ಬಾಲಾಕೋಟ್ ದಾಳಿ ಎಂದು ಕರೆಯುವ ಮೂಲಕ ಗೊಂದಲ ಮೂಡಿಸಿದ್ದಾರೆ.

ಬಾಲಾಕೋಟ್’ನಲ್ಲಿ ಸರ್ಕಾರ ಏರ್ ಕವರ್ ನೀಡದಿರುವುದು ಸರಿಯಲ್ಲ ಎಂದಿರುವ ಮಹುವಾ, ಸೈನಿಕರನ್ನು ಏರ್ ಲಿಫ್ಟ್ ಮಾಡಿಸಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಹೇಳುವ ಮೂಲಕ ನಗಪಾಟಲಿಗೆ ಗುರಿಯಾಗಿದ್ದಾರೆ.

ಮಹುವಾ ಮೊಯಿತ್ರಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ನೆಟ್ಟಿಗರು, ಪುಲ್ವಾಮಾ ದಾಳಿ, ಬಾಲಾಕೋಟ್ ವಾಯುದಾಳಿ ಕುರಿತು ಕಿಂಚಿತ್ತೂ ಮಾಹಿತಿ ಇಲ್ಲದ ಈ ಸಂಸದೆಯಿಂದ ಕೇಂದ್ರ ಸರ್ಕಾರ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಕಿಡಿಕಾರಿದ್ದಾರೆ.