ನವದೆಹಲಿ(ಜು.19): ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್(ಟಿಎಂಸಿ), ಶರದ್ ಪವಾರ್ ನೇತೃತ್ವದ ನ್ಯಾಶಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್’ಸಿಪಿ) ಹಾಗೂ ಭಾರತೀಯ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿವೆ.

ಈ ಕುರಿತು ಮೂರೂ ಪಕ್ಷಗಳಿಗೂ ನೊಟೀಸ್ ಜಾರಿ ಮಾಡಿರುವ ಚುನಾವಣಾ ಆಯೋಗ, ಇದೇ ಆ.15ರೊಳಗಾಗಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಏಕೆ ರದ್ದುಗೊಳಿಸಬಾರದು ಎಂಬ ಪ್ರಶ್ನೆಗೆ ಉತ್ತರಿಸುವಂತೆ ಆದೇಶಿಸಿದೆ.

ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್’ಸಿಪಿ 5 ಸೀಟುಗಳನ್ನು ಪಡೆದಿದ್ದರೆ, ಟಿಎಂಸಿ 18 ಸೀಟುಗಳನ್ನು ಗಳಿಸಿದೆ. ಅದರಂತೆ ಸಿಪಿಐ ಒಂದೇ ಒಂದು ಸ್ಥಾನ ಗಳಿಸಿಲ್ಲ. ಮೂರೂ ಪಕ್ಷಗಳ ಪೈಕಿ ಟಿಎಂಸಿ ಪ.ಬಂಗಾಳದಲ್ಲಿ ಅಧಿಕಾರದಲ್ಲಿದ್ದರೆ, ಎನ್’ಸಿಪಿ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಅಷ್ಟೊಂದು ಸಂಖ್ಯಾಬಲ ಹೊಂದಿಲ್ಲ.

ಈ ಹಿನ್ನೆಲೆಯಲ್ಲಿ ಈ ಮೂರು ಪಕ್ಷಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಳ್ಳುವ ಸಂಭವನೀಯತೆ ಹೆಚ್ಚು ಎನ್ನಲಾಗಿದೆ.