ತಿರುಪತ್ತೂರು[ಫೆ.15]: ಯಾವುದೇ ಸರ್ಕಾರಿ ದಾಖಲೆಗಳಲ್ಲೂ ತನ್ನ ಜಾತಿ ಹಾಗೂ ಧರ್ಮದ ಹೆಸರನ್ನು ಬರೆಯಲು ನಿರಾಕರಿಸುತ್ತಲೇ ಬಂದಿದ್ದ ತಮಿಳುನಾಡಿನ ಮಹಿಳೆಯೊಬ್ಬರು ತಾವು ಯಾವುದೇ ಜಾತಿ, ಧರ್ಮಕ್ಕೆ ಸೇರಿದವರು ಅಲ್ಲ ಎಂಬ ಪ್ರಮಾಣಪತ್ರವನ್ನು ಸರ್ಕಾರದಿಂದ ಅಧಿಕೃತವಾಗಿ ಪಡೆದುಕೊಂಡಿದ್ದಾರೆ. ತನ್ಮೂಲಕ ಇಂತಹ ಪ್ರಯತ್ನದಲ್ಲಿ ಸಫಲರಾದ ಮೊದಲಿಗರು ಎನ್ನಿಸಿಕೊಂಡಿದ್ದಾರೆ.

ತಿರುಪತ್ತೂರಿನಲ್ಲಿ ವಕೀಲರಾಗಿರುವ 35 ವರ್ಷದ ಎಂ.ಎ. ಸ್ನೇಹಾ ಅವರಿಗೆ ಫೆ.5ರಂದು ತಮಿಳುನಾಡು ಸರ್ಕಾರದ ಪರವಾಗಿ ತಹಸೀಲ್ದಾರ್‌ ಟಿ.ಎಸ್‌. ಸತ್ಯಮೂರ್ತಿ ಅವರು ‘ಯಾವುದೇ ಜಾತಿ, ಧರ್ಮಕ್ಕೆ ಸೇರಿದವರು ಇವರಲ್ಲ’ ಎಂಬ ಪ್ರಮಾಣಪತ್ರವನ್ನು ಕೊಟ್ಟಿದ್ದಾರೆ.

ಸ್ನೇಹ ಅವರ ಕುಟುಂಬ ಜಾತಿ ಅಥವಾ ಧರ್ಮದಲ್ಲಿ ಯಾವತ್ತಿಗೂ ನಂಬಿಕೆ ಇಟ್ಟಿರಲಿಲ್ಲ. ಸ್ನೇಹ ಅವರ ಜನನ ಪ್ರಮಾಣ ಪತ್ರ, ಶಾಲಾ ಪ್ರಮಾಣಪತ್ರ ಸೇರಿದಂತೆ ಎಲ್ಲ ದಾಖಲೆಗಳಲ್ಲೂ ಜಾತಿ ಹಾಗೂ ಧರ್ಮದ ಕಾಲಂ ಮುಂದೆ ಖಾಲಿ ಬಿಡಲಾಗಿದೆ. ಇದಕ್ಕೆ ಅಧಿಕೃತವಾಗಿ ಪ್ರಮಾಣಪತ್ರ ಪಡೆದುಕೊಳ್ಳಲು 2010ರಿಂದಲೂ ಅವರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಆರಂಭದಲ್ಲಿ ತಿರಸ್ಕರಿಸಿದ್ದ ಅಧಿಕಾರಿಗಳು, ಕೊನೆಗೆ ಕೊಟ್ಟಿದ್ದಾರೆ.

ಸ್ನೇಹ ಅವರ ಪತಿ ಪಾರ್ಥಿಬ ರಾಜ ಅವರು ತಮಿಳು ಪ್ರಾಧ್ಯಾಪಕರಾಗಿದ್ದಾರೆ. ಈ ದಂಪತಿಗೆ ಮೂವರು ಪುತ್ರಿಯರು ಇದ್ದು, ಅವರ ಎಲ್ಲ ದಾಖಲೆಗಳಲ್ಲೂ ಜಾತಿ, ಧರ್ಮದ ಕಾಲಂ ಅನ್ನು ಖಾಲಿ ಬಿಡುತ್ತಾ ಬಂದಿದ್ದಾರೆ. ಮೂವರೂ ಮಕ್ಕಳಿಗೆ ಎರಡು ಧರ್ಮಗಳು ಸಮ್ಮಿಳಿತಗೊಂಡಿರುವ ಹೆಸರುಗಳಾದ ಆಧಿರೈ ನಸ್ರೀನ್‌, ಆಧಿಲಾ ಐರಿನ್‌ ಹಾಗೂ ಆರೀಫಾ ಜೆಸ್ಸಿ ಎಂದು ಹೆಸರಿಟ್ಟಿದ್ದಾರೆ!