ತಿರುಪತಿ[ಮೇ.11]: ದೇಶದ ಶ್ರೀಮಂತ ದೇವರು ಎಂದೇ ಕರೆಯಲಾಗುವ ತಿರುಪತಿ ತಿಮ್ಮಪ್ಪನ ಬಳಿ ಬರೋಬ್ಬರಿ 9000 ಕೆ.ಜಿ.ಯಷ್ಟುಚಿನ್ನ ಇರುವ ಸಂಗತಿ ಬೆಳಕಿಗೆ ಬಂದಿದೆ.

ಈ ಪೈಕಿ 7235 ಕೆ.ಜಿ. ಚಿನ್ನವನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಸಂಸ್ಥೆ ವಿವಿಧ ಚಿನ್ನ ಠೇವಣಿ ಯೋಜನೆಗಳಡಿ ಬ್ಯಾಂಕುಗಳಲ್ಲಿ ಇಟ್ಟಿದೆ. ಉಳಿದಂತೆ 1934 ಕೆ.ಜಿ.ಯಷ್ಟುಚಿನ್ನ ದೇಗುಲದ ಖಜಾನೆಯಲ್ಲಿದೆ. ಠೇವಣಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಳೆದ ತಿಂಗಳಷ್ಟೇ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನಿಂದ ಬಂದ 1381 ಕೆ.ಜಿ. ಚಿನ್ನವೂ ಇದರಲ್ಲಿ ಸೇರಿದೆ. ಬ್ಯಾಂಕಿನಿಂದ ಬಂದಿರುವ 1381 ಕೆ.ಜಿ. ಚಿನ್ನವನ್ನು ಎಲ್ಲಿ ಮತ್ತೆ ಠೇವಣಿ ಮಾಡಬೇಕು, ಹೆಚ್ಚು ರಿಟರ್ನ್‌ ಎಲ್ಲಿ ಸಿಗುತ್ತದೆ ಎಂಬ ಅಧ್ಯಯನದಲ್ಲಿ ಟಿಟಿಡಿ ನಿರತವಾಗಿದೆ. ಅದನ್ನು ಠೇವಣಿ ಮಾಡಿದ ಬಳಿಕ 553 ಕೆ.ಜಿ.ಯಷ್ಟುಚಿನ್ನ ದೇಗುಲದಲ್ಲಿ ಇರುತ್ತದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ತಿರುಮಲ-ತಿರುಪತಿ ದೇವಸ್ಥಾನದ ಒಡೆತನದಲ್ಲಿ ಎಷ್ಟುಚಿನ್ನವಿದೆ ಎಂಬ ವಿಷಯವನ್ನು ದೇಗುಲದ ಅಧಿಕಾರಿಗಳು ಬಹಿರಂಗಪಡಿಸುವುದಿಲ್ಲ. ಆದರೆ ಕಳೆದ ತಿಂಗಳು ದೇಗುಲಕ್ಕೆ ಸೇರಿದ 1381 ಕೆ.ಜಿ. ಚಿನ್ನವನ್ನು ಚುನಾವಣಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವುದರೊಂದಿಗೆ ಈ ವಿಷಯ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.

2016ರಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಚೆನ್ನೈ ಶಾಖೆಯಲ್ಲಿ 1311 ಕೆ.ಜಿ. ಚಿನ್ನವನ್ನು ಠೇವಣಿ ಇಟ್ಟಿತ್ತು. ಮೂರು ವರ್ಷಗಳ ಠೇವಣಿ ಅದಾಗಿತ್ತು. ಬಡ್ಡಿ ರೂಪದಲ್ಲಿ 70 ಕೆ.ಜಿ. ಚಿನ್ನವನ್ನು ಸೇರಿಸಿತ್ತು. ಠೇವಣಿ ಅವಧಿ ಮುಗಿದ ಹಿನ್ನೆಲೆಯಲ್ಲಿ ದೇಗುಲದ ವಶಕ್ಕೆ ಚಿನ್ನ ಒಪ್ಪಿಸಲು ತರುತ್ತಿದ್ದಾಗ ತಮಿಳುನಾಡಿನ ತಿರುವಳ್ಳೂರ್‌ ಜಿಲ್ಲೆಯಲ್ಲಿ ಏ.17ರಂದು ಅಧಿಕಾರಿಗಳು ವಾಹನ ತಡೆದಿದ್ದರು. ಇದು ತಿರುಪತಿ ದೇಗುಲದ ಚಿನ್ನ ಎಂದಾಗ ಅಧಿಕಾರಿಗಳು ನಿರಾಕರಿಸಿದ್ದರು. ಆ ಬಗ್ಗೆ ಟೀಕೆಗಳು ಬಂದಿದ್ದವು.

ಎರಡು ದಿನಗಳ ಬಳಿಕ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅಧಿಕಾರಿಗಳು ದಾಖಲೆ ತೋರಿಸಿ, ದೇಗುಲದ ವಶಕ್ಕೆ ಚಿನ್ನ ಒಪ್ಪಿಸಿದ್ದರು. ಆಗ ಸ್ಪಷ್ಟನೆ ನೀಡಿದ್ದ ದೇಗುಲದ ಆಡಳಿತ ಮಂಡಳಿ, ಚಿನ್ನ ದೇವಸ್ಥಾನಕ್ಕೆ ಸೇರುವವರೆಗೂ ಅದು ತನ್ನದಾಗುವುದಿಲ್ಲ ಎಂದು ತನ್ನ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿತ್ತು.