ತಿರುಪತಿ[ಜು.19]: ಭಕ್ತಾದಿಗಳಿಂದ ಸದಾ ಗಿಜಿಗುಡುವ ತಿರುಪತಿ- ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ತ್ವರಿತವಾಗಿ ದರ್ಶನ ಅವಕಾಶ ಕಲ್ಪಿಸುತ್ತಿದ್ದ ಕ್ಯೂ ರಹಿತ ವಿಐಪಿ ದರ್ಶನ ವ್ಯವಸ್ಥೆ ಗುರುವಾರದಿಂದ ರದ್ದಾಗಿದೆ. ಹೀಗಾಗಿ ವಿಐಪಿಗಳು ಇನ್ನು ಮುಂದೆ ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಲ್ಲುವ ಮೂಲಕ ದೇವರ ಮುಂದೆ ಎಲ್ಲರೂ ಒಂದೇ ಎಂಬ ಸಂದೇಶ ಸಾರುವಂತಾಗಿದೆ.

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನೂತನ ಮುಖ್ಯಸ್ಥ ವೈ.ವಿ. ಸುಬ್ಬಾರೆಡ್ಡಿ ಅವರು ವಿಐಪಿ ದರ್ಶನ ರದ್ದುಗೊಳಿಸುವ ಸಂಬಂಧ ಕಳೆದ ವಾರ ನಿರ್ಧಾರ ಕೈಗೊಂಡಿದ್ದರು. ಗುರುವಾರದಿಂದ ಅದು ಜಾರಿಗೆ ಬಂದಿದೆ. ಹಿರಿಯ ಗಣ್ಯರ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶ ಇಲ್ಲ. ಆದರೆ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ದೇವರ ಮುಂದೆ ಎಲ್ಲ ಭಕ್ತರೂ ಸಮಾನರು. ಮುಂದಿನ ದಿನಗಳಲ್ಲಿ ಅತಿಗಣ್ಯರಿಗೆ ಬೇರೆ ವ್ಯವಸ್ಥೆ ಮಾಡಲಾಗುವುದು ಎಂದು ಸುಬ್ಬಾರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದುವರೆಗೆ ಎಲ್‌ 1, ಎಲ್‌ 2 ಮತ್ತು ಎಲ್‌ 3 ಎಂಬ ಮೂರು ವಿಭಾಗಗಳಲ್ಲಿ ಬೇರೆ ಬೇರೆ ಗಣ್ಯರಿಗೆ ದೇವರ ದರ್ಶನಕ್ಕೆ ನೇರ ಅವಕಾಶ ಸಿಗುತ್ತಿತ್ತು.