ಕಲಬುರಗಿ :  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಲು ಹೋಗಿ ಹಾಳಾದರು. ಈಗ ಬಿಜೆಪಿಗೆ ಬಂದ ಮೇಲೆ ಉದ್ಧಾರವಾಗಿದ್ದಾರೆ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದಿಗಳನ್ನು ಬಗ್ಗು ಬಡಿಯುತ್ತೇನೆ, ಟಿಪ್ಪು ಜಯಂತಿ ಆಚರಿಸಿಯೇ ತೀರುತ್ತೇನೆಂದು ಹೇಳಿಕೊಂಡು ಸಿದ್ದರಾಮಯ್ಯ ಧರ್ಮ ಒಡೆಯಲು ಟಿಪ್ಪು ಜಯಂತಿಯನ್ನು ಆಚರಣೆಗೆ ತಂದರು. ಜನರ ವಿರೋಧ ಕಟ್ಟಿಕೊಂಡು ಮುಸ್ಲಿಮರನ್ನು ಓಲೈಸಲು ಹೋದರು. ಕೊನೆಗೆ ಟಿಪ್ಪು ಜಯಂತಿ ಆಚರಣೆ ಮಾಡಿ ಚುನಾವಣೆಯಲ್ಲಿ ಸೋತು ಸಿಎಂ ಸ್ಥಾನದಿಂದ ಕೆಳಗಿಳಿದರು. ಆದರೆ, ಈಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತ್ರ ಟಿಪ್ಪು ಜಯಂತಿ ಆಚರಣೆಗೆ ತೆರಳದೆ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಸರ್ಕಾರ ಬದುಕಿದೆಯೋ? ಸತ್ತಿದೆಯೋ?

ಕಲಬುರಗಿ :  ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದ್ದಷ್ಟೇ ಬಂತು, ಬರ ಪರಿಹಾರ ಕಾಮಗಾರಿ ಕೈಗೊಳ್ಳೋದು ಯಾವಾಗ? ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ರೈತರು, ಸಾಮಾನ್ಯರ ಪಾಲಿಗೆ ಸಮ್ಮಿಶ್ರ ಸರ್ಕಾರ ಬದುಕಿದೆಯೋ, ಸತ್ತಿದೆಯೋ? ಎಂದು ಗುಡುಗಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರಗಾಲದಿಂದಾಗಿ ರಾಜ್ಯದ ರೈತರು ಕಂಗಾಲಾಗಿದ್ದಾರೆ. ರೈತರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ. 100 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆಯೇ ಹೊರತು ಬರ ಕಾಮಗಾರಿಗಳನ್ನು ಈವರೆಗೂ ಕೈಗೊಂಡಿಲ್ಲ ಎಂದು ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಬರ ಕಾಮಗಾರಿ ಕೈಗೊಳ್ಳದೆ ಸುಮ್ಮನೆ ಕುಳಿತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದುಕಿದೆಯೋ, ಇಲ್ಲವೋ ಎಂಬ ಶಂಕೆ ಕಾಡುತ್ತಿದೆ ಎಂದರು.

ರೈತರ ಸಾಲ ಮನ್ನಾ ಮಾಡಿದ್ದೇನೆಂದು ಹೇಳುತ್ತಾ ತಿರುಗಾಡುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ‘ಪೇಪರ್‌ ಟೈಗರ್‌’ ಎಂದ ಈಶ್ವರಪ್ಪ, ರೈತರಿಗೆ ಬ್ಯಾಂಕ್‌ನವರು ನೋಟಿಸ್‌ ಮೇಲೆ ನೋಟಿಸ್‌ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ, ಬಂಧಿಸುವ ಬೆದರಿಕೆ ಹಾಕುತ್ತಿದ್ದರೂ ಸರ್ಕಾರ ಮೌನವಾಗಿದೆ ಎಂದು ಕಿಡಿಕಾರಿದರು.