ಹೊಸ ವರ್ಷ ಸ್ವಾಗತಿಸುವ ಸಂಭ್ರಮದ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸಿ ದಂತೆ ಎಚ್ಚರಿಕೆ ವಹಿಸಿರುವ ನಗರ ಪೊಲೀಸರು, ಡಿ.31 ರಂದು ರಾತ್ರಿ ರಾಜಧಾನಿ ವ್ಯಾಪ್ತಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಬೆಂಗಳೂರು (ಡಿ.28): ಹೊಸ ವರ್ಷ ಸ್ವಾಗತಿಸುವ ಸಂಭ್ರಮದ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸಿ ದಂತೆ ಎಚ್ಚರಿಕೆ ವಹಿಸಿರುವ ನಗರ ಪೊಲೀಸರು, ಡಿ.31 ರಂದು ರಾತ್ರಿ ರಾಜಧಾನಿ ವ್ಯಾಪ್ತಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಹೊಸ ವರ್ಷಾಚರಣೆಗೆ ಭಂಗವಾಗದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸಿದ್ದೇವೆ. ಪ್ರಮುಖವಾಗಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 15 ಸಾವಿರ ಪೊಲೀಸರನ್ನು ಭದ್ರ ತೆಗೆ ನಿಯೋಜಿಸಲಾಗುತ್ತದೆ. ಹಾಗೆ ಪ್ರಮುಖ ಮೇಲ್ಸೇತುವೆಗಳಲ್ಲಿ ಭಾನುವಾರ ರಾತ್ರಿ 9 ಗಂಟೆ ಬಳಿಕ ಸಂಚಾರ ನಿಷೇಧಿಸಲಾಗಿದೆ ಎಂದರು. ನಾಲ್ವರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯು ಕ್ತರು, 19 ಡಿಸಿಪಿ, 49 ಎಸಿಪಿ, 250 ಪಿಐ, 400 ಪಿಎಸ್‌ಐ, 700 ಎಎಸ್‌ಗಳು ಸೇರಿ 15 ಸಾವಿರ ಪೊಲೀಸರು, 1 ಸಾವಿರ ಸಿವಿಲ್ ಡಿಫೆನ್ಸ್ ಹಾಗೂ 40 ಕೆಎಸ್‌ಆರ್‌ಪಿ ಮತ್ತು 30 ಕೆಎಸ್‌ಆರ್‌ಪಿ ತುಕಡಿಗಳು ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಎಂ.ಜಿ.ರಸ್ತೆ ಕಾರ್ಯಕ್ರಮದ ಭದ್ರತೆ: ಕಳೆದ ಬಾರಿ ಲೈಂಗಿಕ ಕಿರುಕುಳ ಆರೋಪ ವಿವಾದದ ಹಿನ್ನೆಲೆಯಲ್ಲಿ ಜಾಗ್ರತಗೊಂಡಿರುವ ಪೊಲೀಸರು, ಈ ಬಾರಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಜಂಕ್ಷನ್‌ನಲ್ಲಿ ನಡೆಯಲಿರುವ ವರ್ಷಾಚರಣೆ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಹಿಂದಿನ ಸಾಲಿಗಿಂತ ಈ ಬಾರಿ ಎರಡು ಪಟ್ಟು ಭದ್ರತೆ ಹೆಚ್ಚಿಸಲಾಗಿದೆ ಎಂದು ಆಯುಕ್ತರು ಹೇಳಿದರು. ಇಲ್ಲಿಗೆ ಎರಡು ಸಾವಿರ ಪೊಲೀಸರು, 1,500 ಗೃಹ ರಕ್ಷಳ ಸಿಬ್ಬಂದಿ ಬಂದೋಬಸ್ತ್'ಗೆ ನಿಯೋಜಿಸಲಾಗುತ್ತದೆ. ಆಯುಕ್ತರು ಖುದ್ದು ಉಸ್ತುವಾರಿ ವಹಿಸಲಿದ್ದಾರೆ. ಹಾಗೆ 300 ಸಿಸಿಟಿವಿ ಕ್ಯಾಮೆರಾ ಅಳವಡಿಕೆ, 4 ಕಣ್ಗಾವಲು ಗೋಪುರ ನಿರ್ಮಿಸಿ ಹದ್ದಿನ ಕಣ್ಣಿಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಗಸ್ತು ವಾಹನಗಳು: ನಗರದಲ್ಲಿ 500 ಹೊಯ್ಸಳ ಹಾಗೂ 250 ದ್ವಿಚಕ್ರ ವಾಹನಗಳು (ಚೀತಾ) ಗಸ್ತು ನಡೆಸಲಿವೆ. ಸಣ್ಣದೊಂದು ಘಟನೆ ಸಂಭವಿಸಿದರೂ ಕ್ಷಣಾರ್ಧದಲ್ಲಿ ಪೊಲೀಸರು ರಕ್ಷಣೆಗೆ ಧಾವಿಸಲಿದ್ದಾರೆ. ಪ್ರಸುತ್ತ ಬೆಂಗಳೂರು ನಗರ ವ್ಯಾಪ್ತಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗ ಸೇರಿ ಒಟ್ಟು 750 ಸಿಸಿಟಿವಿ ಕ್ಯಾಮೆರಾಗಳಿವೆ. ಇದಲ್ಲದೆ ವರ್ಷಾಚರಣೆಗೆ ಸಲುವಾಗಿ ಹೆಚ್ಚುವರಿಯಾಗಿ 500 ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಹದ್ದಿನ ಕಣ್ಣಿಡಲಾಗಿದೆ. ಹಾಗೆ ಬ್ರಿಗೇಡ್, ಚರ್ಚ್ ಸ್ಟ್ರೀಟ್‌ಗಳಲ್ಲಿ ವಿಶೇಷ ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಹನ ನಿಲುಗಡೆ ನಿಷೇಧ: ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಲ್ಲಿ ಭಾನುವಾರ ಮಧ್ಯಾಹ್ನ 3 ರಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಹಾಗೆಯೇ ಹೆಬ್ಬಾಳ ಹೊರತುಪಡಿಸಿ ಮೈಸೂರು, ಹೊಸೂರು ಹಾಗೂ ತುಮಕೂರು ರಸ್ತೆಗಳು ಸೇರಿದಂತೆ ನಗರದ ಬಹುತೇಕ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
