ಮಥುರಾ[ಆ.03]: ತ್ರಿವಳಿ ತಲಾಖ್‌ ಅಪರಾಧ ಕಾಯ್ದೆ ಜಾರಿಯಾದ ಬೆನ್ನಲ್ಲೇ ಮುಸ್ಲಿಂ ಮಹಿಳೆಯರಿಗೆ ತಲಾಖ್‌ ನೀಡಿರುವುದರ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ. ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕಾಗಿ ಹರ್ಯಾಣದ ನುಹ್‌ ಜಿಲ್ಲೆಯ ನಿವಾಸಿ ಇಕ್ರಾನ್‌ ಎಂಬುವವರು ತಮ್ಮ ಪತ್ನಿ ಜುಮಿರಾತ್‌ಗೆ ತಲಾಖ್‌ ಹೇಳಿ ವಿಚ್ಛೇದನ ನೀಡಿದ್ದಾನೆ.

ಇಕ್ರಾನ್‌ ವಿರುದ್ಧ ಜುಮಿರಾತ್‌ ತ್ರಿವಳಿ ತಲಾಖ್‌ ಕಾಯ್ದೆಯಡಿ ದೂರು ದಾಖಲಿಸಿದ್ದಾಳೆ. ಅಲ್ಲದೇ, ಮಹಾರಾಷ್ಟ್ರದ ಥಾಣೆಯಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಮೂರು ಬಾರಿ ತಲಾಖ್‌ ಹೇಳಿ ವಿಚ್ಛೇದನ ನೀಡಿದ್ದಾನೆ ಎಂದು ಮಹಿಳೆಯೋರ್ವಳು ಥಾಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇದೇ ವೇಳೆ ಉತ್ತರಪ್ರದೇಶದ ಮಥುರಾದಲ್ಲೂ ಒಂದು ಪ್ರಕರಣ ದಾಖಲಾಗಿದೆ.

ಹರ್ಯಾಣದ ನುಹ್‌ ಜಿಲ್ಲೆಯಲ್ಲಿ ಫೋನ್‌ ಮೂಲಕ ಮೂರು ಬಾರಿ ತಲಾಖ್‌ ಹೇಳಿದ ಸಾಲುದ್ದೀನ್‌ ಎಂಬುವವರ ವಿರುದ್ಧ ನಾಗಿನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಕಾಯ್ದೆ ಜಾರಿಯಾದ 2 ದಿನದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆ ಕಾಯ್ದೆಯಲ್ಲಿ ತಲಾಖ್‌ ಎಂದು ಮೂರು ಬಾರಿ ಹೇಳಿ ಪತ್ನಿಗೆ ವಿಚ್ಛೇದನ ನೀಡಿದ ವ್ಯಕ್ತಿಯನ್ನು 3 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ.

ಕಾಯ್ದೆ ವಿರುದ್ಧ ಸುಪ್ರೀಂಗೆ ಅರ್ಜಿ

ತ್ರಿವಳಿ ತಲಾಖ್‌ ಅಪರಾಧ ಕಾಯ್ದೆ ಜಾರಿ ವಿರುದ್ಧ ‘ಸಮಸ್ತ ಕೇರಳ ಜಮೈತುಲಾ ಉಲೇಮಾ’ ಸಂಘಟನೆ ಸುಪ್ರೀಕೋರ್ಟ್‌ ಮೆಟ್ಟಿಲೇರಿದೆ. ಸರ್ಕಾರ ಅಸಂವಿಧಾನಿಕ ಕಾನೂನು ಜಾರಿ ಮಾಡಿದೆ. ಇದನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಿದೆ.