ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಸುಳಿಗೆ ಸಿಲುಕಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸೋದರ ಸಂಸದ ಡಿ.ಕೆ.ಸುರೇಶ್ ಅವರಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಬಂದಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

ಬೆಂಗಳೂರು (ಆ.15): ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಸುಳಿಗೆ ಸಿಲುಕಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸೋದರ ಸಂಸದ ಡಿ.ಕೆ.ಸುರೇಶ್ ಅವರಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಬಂದಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

ಸದಾಶಿವನಗರದಲ್ಲಿರುವ ಸಂಸದರ ಗೃಹ ಕಚೇರಿಗೆ ರವಿ ಪೂಜಾರಿ ಎಂಬಾತನ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಈ ಕರೆ ಬಂದ ಸಂದರ್ಭದಲ್ಲಿ ಸಂಸದರು ಬಿಡದಿ ಹತ್ತಿರದ ಈಗಲ್‌ಟನ್ ರೆಸಾರ್ಟ್‌ನಲ್ಲಿ ತಂಗಿದ್ದ ಗುಜರಾತ್ ಶಾಸಕರ ಉಸ್ತುವಾರಿ ವಹಿಸಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಸಂಸದರ ಸಹಾಯಕ ಅರುಣ್ ದೇವ್ ದೂರು ದಾಖಲಿಸಿದ್ದಾರೆ. ಹಿಂದಿಯಲ್ಲಿ ಮಾತನಾಡಿದ ಆರೋಪಿ, ‘ನಾನು ರವಿ ಪೂಜಾರಿ. ಹಣಕ್ಕಾಗಿ ಕರೆ ಮಾಡಿದ್ದೇನೆ’ ಎಂದಿದ್ದಾನೆ. ಪೂಜಾರಿ ವಿರುದ್ಧ ಸುಲಿಗೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಂಟರ್‌ನೆಟ್ ಕರೆ ಶಂಕೆ:

ಡಿ.ಕೆ.ಸುರೇಶ್ ಅವರ ಕಚೇರಿಗೆ ಬಂದಿರುವ ಕರೆಯ ಮೂಲ ಪತ್ತೆ ಹಚ್ಚಲು ಸೈಬರ್ ಕ್ರೈಂ ಅಧಿಕಾರಿಗಳ ನೆರವು ಪಡೆಯಲು ಸದಾಶಿವನಗರ ಪೊಲೀಸರು ಯತ್ನಿಸಿದ್ದಾರೆ. ಸಚಿವರ ದೂರವಾಣಿ ಕರೆಗಳನ್ನು ಪರಿಶೀಲಿಸಿದಾಗ ಆರೋಪಿಯು, ೧೪ ಅಂಕಿಗಳ ಸಂಖ್ಯೆಯನ್ನು ಬಳಸಿ ಕರೆ ಮಾಡಿರುವುದು ಗೊತ್ತಾಗಿದೆ. ಇದು ಇಂಟರ್ನೆಟ್ ಕಾಲ್ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರವಿ ಪೂಜಾರಿ ಎಂದು ಪರಿಚಯಿಸಿಕೊಂಡಿರುವ ಆ ವ್ಯಕ್ತಿ, ‘ಸುರೇಶ್’ ಎಲ್ಲಿದ್ದಾರೆ ಎಂದು ವಿಚಾರಿಸಿದ್ದಾನೆ. ಈ ವೇಳೆ ಅವರು ಬಿಡದಿ ಹತ್ತಿರದ ಈಗಲ್‌ಟನ್ ರೆಸಾರ್ಟ್‌ನಲ್ಲಿದ್ದ ಕಾರಣ ಅರುಣ್ ದೇವ್ ಅವರು ಸಂಸದರ ಆಪ್ತ ಸಹಾಯಕನ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಆದರೆ ಆ ಸಂಖ್ಯೆಗೆ ಆರೋಪಿ ಕರೆ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಕೆಲ ತಿಂಗಳುಗಳ ಹಿಂದೆ ಸಚಿವ ರಮಾನಾಥ ರೈ ಅವರಿಗೂ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ ಬಂದಿತ್ತು. ಆದರೆ ಆಗ ಪೊಲೀಸರು, ರವಿ ತಂಡದ ಸದಸ್ಯರು ಎಂದು ಶಂಕಿಸಿ ಕೆಲವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಈ ವೇಳೆ ಕೆಲ ಮಾಧ್ಯಮಗಳಿಗೆ ಖುದ್ದು ಕರೆ ಮಾಡಿ ರವಿ ಪೂಜಾರಿ, ತಾನು ಸಚಿವರಿಗೆ ಕರೆ ಮಾಡಿಲ್ಲ ಎಂದು ಅಲವತ್ತುಕೊಂಡಿದ್ದ. ಹಾಗೆಯೇ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರಿಗೂ ಪೂಜಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬನಿಂದ ಕರೆ ಬಂದಿತ್ತು. ತಮ್ಮ ಪುತ್ರ ಅನೂಪ್ ನಟಿಸಿದ್ದ ಪಂಟ ಚಿತ್ರ ಬಿಡುಗಡೆಗೆ ಹಫ್ತಾ ಕೊಡುವಂತೆ ಶಾಸಕರಿಗೆ ಪೂಜಾರಿ ಬೆದರಿಸಿದ್ದ ಎಂದು ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣ ಕುರಿತು ಸಿಸಿಬಿ ತನಿಖೆ ಮುಂದುವರೆದಿದೆ. 

ಹುಸಿ ಕರೆ ಇರಬಹುದು:

ಸಂಸದ ಡಿ.ಕೆ.ಸುರೇಶ್ ಅವರಿಗೆ ಭೂಗತ ಪಾತಕಿ ಹೆಸರಿನಲ್ಲಿ ಹುಸಿ ಕರೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಕರೆ ಮಾಡಿದಾತ ರವಿ ಪೂಜಾರಿ ಹೆಸರು ಪ್ರಸ್ತಾಪಿಸಿದ್ದರಿಂದ ಎಫ್‌ಐಆರ್‌ನಲ್ಲಿ ಪೂಜಾರಿ ಹೆಸರು ನಮೂದಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.